'ಸೋಂಕಿನ ಭಯ': ರಿಷಬ್ ಪಂತ್ ಐಸಿಯುನಿಂದ ವಿಶೇಷ ಖಾಸಗಿ ವಾರ್ಡ್ ಗೆ ಶಿಫ್ಟ್

ಡೆಹ್ರಾಡೂನ್: ಭಾರತದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ Rishabh Pant "ಉತ್ತಮವಾಗಿದ್ದಾರೆ ಮತ್ತು ಸೋಂಕಿನ ಭಯದಿಂದ ವಿಶೇಷ ಖಾಸಗಿ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ" ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ಸೋಮವಾರ ಬಹಿರಂಗಪಡಿಸಿದ್ದಾರೆ.
"ಸೋಂಕಿನ ಭಯದಿಂದಾಗಿ ನಾವು ಅವರನ್ನು ವಿಶೇಷ ಖಾಸಗಿ ವಾರ್ಡ್ ಗೆ ಸ್ಥಳಾಂತರಿಸಲು ಅವರ ಕುಟುಂಬ ಹಾಗೂ ಆಸ್ಪತ್ರೆ ಆಡಳಿತಕ್ಕೆ ತಿಳಿಸಿದ್ದೇವೆ. ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ" ಎಂದು ಶರ್ಮಾ ಎಎನ್‌ಐಗೆ ತಿಳಿಸಿದ್ದಾರೆ.
ಡಿಸೆಂಬರ್ 30 ರಂದು ರೂರ್ಕಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಪಂತ್ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ನೆರವು ನೀಡಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರವಿವಾರ ಘೋಷಿಸಿದ್ದರು.
ಅಪಘಾತ ಸಂಭವಿಸಿದಾಗ ಪಂತ್ ಕಾರಿನಲ್ಲಿ ಒಬ್ಬರೇ ಇದ್ದರು. ಈ ವೇಳೆ ನಿದ್ರೆಗೆ ಜಾರಿದ್ದರು ಎಂದು ವರದಿಯಾಗಿದೆ.





