ಬೈರಿದೇವರಕೊಪ್ಪದ ದರ್ಗಾ ತೆರವಿಗೆ ಪ್ರಹ್ಲಾದ್ ಜೋಷಿ ನೇರ ಕಾರಣ: ಸಿದ್ದರಾಮಯ್ಯ ಆರೋಪ

ಹುಬ್ಬಳ್ಳಿ, ಜ. 2: ಹುಬ್ಬಳಿ ಹೆದ್ದಾರಿ ಬಳಿ ಸೈಯದ್ ಮಹಮ್ಮದ್ ಖಾದ್ರಿ ದರ್ಗಾ ಇದ್ದು, ಸಮೀಪದಲ್ಲಿ ದೇವಾಲಯಗಳು ಇವೆ. ರಸ್ತೆ ಅಗಲೀಕರಣ ಮಾಡುವ ವೇಳೆ ಆ ದರ್ಗಾವನ್ನು ಮುಟ್ಟಲು ನಮ್ಮ ಸರಕಾರದ ಅವಧಿಯಲ್ಲಿ ನಾನು ಬಿಟ್ಟಿರಲಿಲ್ಲ. ಆದರೆ, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡಕ್ಕೆ ಮಣಿದು ದರ್ಗಾವನ್ನು ಧ್ವಂಸ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಈ ದರ್ಗಾಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮದವರು ನಡೆದುಕೊಳ್ಳುತ್ತಿದ್ದರು. ಇಂತಹ ದರ್ಗಾವನ್ನು ರಾತ್ರೋರಾತ್ರಿ ಒಡೆದುಹಾಕುವ ಅಗತ್ಯ ಏನಿತ್ತು? ಅದಕ್ಕಿಂತ ಕಿರಿದಾದ ರಸ್ತೆಗಳು ಸಾಕಷ್ಟು ಇದಾವೆ. ನಾನೇ ಹೋಗಿ ನೋಡಿಕೊಂಡು ಬಂದಿದ್ದೇನೆ. ಇದನ್ನು ದ್ವಂಸ ಮಾಡುವ ಬದಲು ಅವರಿಗೆ ಸಮಯಾವಕಾಶ ಕೊಟ್ಟಿದ್ದರೆ ಸಾಕಾಗಿತ್ತು ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಬೇರೆಯವರಿಗೆ ಧಮ್ ಇದ್ರೆ, ತಾಕತ್ ಇದ್ರೆ ಎನ್ನುತ್ತಾರೆ. ಆದರೆ ಅವರಿಗೆ ಈ ಧಮ್, ತಾಕತ್ ಯಾಕೆ ಇಲ್ಲ? ಮೋದಿ ಎದುರು ಗಡಗಡ ಗಡಗಡ ಎಂದು ನಡುಗುತ್ತಾರೆ. ಆರೆಸ್ಸೆಸ್‍ನವರು ಕೂತ್ಕೋ ಅಂದ್ರೆ ಕೂತ್ಕೋತಾರೆ, ನಿಂತ್ಕೊ ಎಂದರೆ ನಿಂತ್ಕೋತಾರೆ ಇವರು ಬೇಕಾ?’ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಬಿಜೆಪಿ ದ್ವೇಷ ರಾಜಕೀಯವನ್ನು ಹೆಚ್ಚೆಂದರೆ ಇನ್ನೂ 3 ತಿಂಗಳು ಮಾಡಬಹುದು. ಜಾತಿ, ಧರ್ಮಗಳ ಆಧಾರದ ಮೇಲೆ ಜನರ ಮನಸುಗಳನ್ನು ಒಡೆದು ಹಾಕಿದ್ದಾರೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಮಾಡುತ್ತಿದ್ದಾರೆ. ಒಡೆದಿರುವ ಜನರ ಮನಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮನಸುಗಳನ್ನು ಒಂದುಗೂಡಿಸುವ ಬದ್ಧತೆ ಇರುವ ಪಕ್ಷ. ಬಿಜೆಪಿಯವರು ಸಮಾಜ ಒಡೆಯುವವರು. ದೇಶವನ್ನು ಜೋಡಿಸುವವರು ಬೇಕಾ? ದೇಶ ಒಡೆಯುವವರು ಬೇಕಾ? ಎಂದು ಜನ ತೀರ್ಮಾನ ಮಾಡಬೇಕು ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.
ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಬಡವರು, ರೈತರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಭ್ರಷ್ಟಾಚಾರ, ದ್ವೇಷ ರಾಜಕೀಯ ಇವೆಲ್ಲವೂ ಕೊನೆಯಾಗಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ತರಬೇಕು. ಈ ಕೆಲಸ ಮಾಡುವ ಸಂಕಲ್ಪ ಇಂದೇ ಮಾಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.







