ಮುಲ್ಕಿ: ಕಾರ್ನಾಡು ಮುಸ್ಲಿಂ ಯಂಗ್ ಮೆನ್ಸ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯ ಮಟ್ಟದ ದಫ್ ಸ್ಪರ್ಧೆ

ಮುಲ್ಕಿ: ಇಲ್ಲಿನ ಕಾರ್ನಾಡು ಮುಸ್ಲಿಂ ಯಂಗ್ ಮೆನ್ಸ್‌ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಸ್ವಲಾತ್ ಮಜ್ಲಿಸ್ ಹಾಗೂ "ನಮ್ಮ ಸಹೋದರಿಯರಿಯರ ಮದುವೆಗೆ ಸಹಾಯ ಧನ ನೀಡುವ ಕಾರ್ಯಕ್ರಮ"ವು ಕಾರ್ನಾಡು ಜುಮಾ ಮಸೀದಿಯ ವಠಾರದಲ್ಲಿ ಮರ್ಹೂಮ್ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ ವೇದಿಕೆಯಲ್ಲಿ ರವಿವಾರ ರಾತ್ರಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಲ್ಕಿ ಶಾಫಿ ಜುಮಾ ಮಸೀದಿಯ ಗೌರವಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸಮುದಾಯದ ಯುವಕರು ಮಾದಕ ವ್ಯಸನಗಳ ದಾಸರಾಗುತ್ತಿರುವ ಈ ಸಂದರ್ಭದಲ್ಲಿ ಯುವಕರನ್ನು ಒಗ್ಗೂಡಿಸಿಕೊಂಡು ಪ್ರತಿಭಾವಂಂತರನ್ನು ಗುರುತಿಸಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಏರ್ಪಡಿಸಿರುವುದು ಎಲ್ಲರಿಗೂ ಮಾದರಿಯಾದ ಕೆಲಸ ಎಂದರು.
ಮುಸ್ಲಿಂ ಯಂಗ್ ಮೆನ್ಸ್ ಸಮುದಾಯದ ಬಡ ಹುಡುಗಿರಯರನ್ನು ಗುರುತಿಸಿ ಅವರ ಮದುವೆಗೆ ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಕೆಲಸ. ಇಂತಹಾ ಸಮಾಜಮುಖಿ ಕಾರ್ಯಗಳ ಮೂಲಕ ಅಶಕ್ತರ ಪಾಲಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿರುವ ಮುಸ್ಲಿಂ ಯಂಗ್ ಮೆನ್ಸ್‌ನ ಕಾರ್ಯಕ್ರಮಗಳು ನೂರಾರು ವರ್ಷಗಳ ಕಾಲ ಮುಂದುವರಿಯಬೇಕೆಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಸಲೀಂ ಫೈಝಿ ದುವಾ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕಾರ್ನಾಡ್ ಮಸ್ಜಿದುನ್ನೂರ್ ಜುಮಾ ಮಸೀದಿಯ ಖತೀಬ್ ಕೆ.ಎಸ್. ಇಸ್ಮಾಯೀಲ್ ದಾರಿಮಿ ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ಜುಮಾ ಮಸೀದಿಯ ಅಧ್ಯಕ್ಷ ಲಿಯಾಕತ್‌ಅಲಿ ಮುಲ್ಕಿ ವಹಿಸಿಸಿ ಮಾತನಾಡಿದ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಸಂವಿಧಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಕಾರ್ನಾಡು ಹಿಮಾಯತುಯಲ್ ಇಸ್ಲಾಂ ಸಮಿಯಿಯ ಅಧ್ಯಕ್ಷ ಪುತ್ತುಬಾವ, ನುಸ್ರತುಲ್ ಮಸಾಕೀನ್ ಮುಲ್ಕಿ ಇದರ ಅಧ್ಯಕ್ಷ ಅಮಾನುಲ್ಲಾ ಮುಲ್ಕಿ, ಕಾರ್ನಾಡು ಅಲ್ ಮದರಸತುಲ್ ನೂರಿಯ್ಯಾದ ಸದರ್ ಮುಅಲ್ಲಿಮ್ ಅಬ್ದುಲ್ ರಝಾಕ್ ಮದನಿ ಗೇರುಕಟ್ಟೆ, ಮುಸ್ಲಿಂ ಯಂಗ್‌ಮೆನ್ಸ್ ಅಧ್ಯಕ್ಷ ರಿಯಾಝ್ ಮೊಯ್ದೀನ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟ ನಡೆಯಿತು. ಕಲಂದರ್‌ಶಾ ದಫ್ ಕಮೀಟಿ ಮಣಿಪುರ ಪ್ರಥಮ ಸ್ಥಾನ ಪಡೆದುಕೊಂಡು ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿತು. ಎರಡನೇ ಸ್ಥಾನವನ್ನು ಅನ್ನಜಾತ್ ದಫ್ ಕಮೀಟಿ ಅಲೆಕಳ ಉಳ್ಳಾಲ, ತೃತೀಯ ಸ್ಥಾನವನ್ನು ಲಜಿನತುಲ್ ಅನ್ಸಾರಿಯ್ಯಾ ಕೃಷ್ಣಾಪುರ ನಗದು ಮತ್ತು ಪ್ರಶಸ್ತಿ ಫಲಕವನ್ನು ಪಡೆದುಕೊಂಡಿತು.