ಮೀಸಲಾತಿಯು ಹಂಚಿಕೆಗಿಂತ ಭಿನ್ನ: ನ್ಯಾ. ನಾಗಮೋಹನ್ ದಾಸ್

ಬೆಂಗಳೂರು, ಜ. 2: ‘ಚುನಾವಣೆಗಳು ಹತ್ತಿರ ಬರುತ್ತಿವೆ ಎಂದು ರಾಜಕೀಯ ಒತ್ತಡದಿಂದ ಮೀಸಲಾತಿ ನಿರ್ಧಾರ ಮಾಡಬಾರದು. ಎಲ್ಲ ಸಮುದಾಯಗಳ ಬೇಡಿಕೆಯಂತೆ ಮೀಸಲಾತಿ ಕಲ್ಪಿಸಿದರೆ ಅದು ‘ಮೀಸಲಾತಿ' ಆಗುವುದಿಲ್ಲ, ಬದಲಾಗಿ ಹಂಚಿಕೆಯಾಗುತ್ತದೆ. ಮೀಸಲಾತಿಯು ಹಂಚಿಕೆಗಿಂತ ಭಿನ್ನ’ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ ಮತ್ತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ‘ಮೀಸಲಾತಿ-ಸಮುದಾಯಗಳು ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರವೇ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ‘ದುಂಡುಮೇಜಿನ ಸಭೆ’ಯಲ್ಲಿ ಅವರು ಮಾತನಾಡಿದರು.
ಸರಕಾರಕ್ಕೆ ಇದುವರೆಗೂ ಯಾವ ಯಾವ ಸಮುದಾಯವನ್ನು ಎಲ್ಲಿ ನಿಲ್ಲಿಸಬೇಕು ಎಂಬುದು ತಿಳಿದಿಲ್ಲ. ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡುವ ಮೊದಲು ಕೆಲವು ವೈಜ್ಞಾನಿಕ ಮಾನದಂಡಗಳನ್ನು ಅಂತಿಮ ಮಾಡಬೇಕು. ಮೀಸಲಾತಿ ಕೇಳುತ್ತಿರುವ ಬಲಾಡ್ಯ ಜಾತಿಗಳ ಧ್ವನಿ ಮಾತ್ರ ನಮಗೆ ಕೇಳುತ್ತಿದೆ. ಆದರೆ, 45 ಸಣ್ಣ ಪುಟ್ಟ ಜಾತಿಗಳು ಮೀಸಲಾತಿ ಕೇಳಿಕೊಂಡು ಹಲವು ವರ್ಷಗಳಿಂದ ಸರಕಾರ ಮತ್ತು ಆಯೋಗಗಳ ಮುಂದೆ ತಿರುಗುತ್ತಿವೆ ಎಂದು ಹೇಳಿದರು.
ದೇಶದಲ್ಲಿ ಮೊಟ್ಟಮೊದಲು ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದಾಗ ರೈತ ಸಮುದಾಯವು ಮೀಸಲಾತಿಗಾಗಿ ಬೇಡಿಕೆಯನ್ನು ಇಟ್ಟಿಲ್ಲ. ಎಪ್ಪತೈದು ವರ್ಷಗಳಿಂದ ಸರಕಾರವು ಅನುಸರಿಸಿದ ನೀತಿಯಿಂದ ಕೃಷಿ ಬಿಕ್ಕಟ್ಟು ಉಂಟಾಗಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರೈತರು ಮೀಸಲಾತಿಯ ದಾರಿ ಹುಡುಕುತ್ತಿದ್ದು, ಅವರು ಮೀಸಲಾತಿಯನ್ನು ಕೇಳುವುದು ತಪ್ಪಲ್ಲ. ಆದರೂ ಮೀಸಲಾತಿ ನೀಡುವುದು ಬಿಕ್ಕಟ್ಟಿಗೆ ಪರಿಹಾರವಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ಅನೇಕ ಜನರಿಗೆ ಮೀಸಲಾತಿಯ ಕುರಿತು ಸ್ಪಷ್ಟತೆ ಇಲ್ಲ. ಸರಕಾರವೂ ಒಂದೊಂದು ದಿನ ಒಂದೊಂದು ಹೇಳಿಕೆಯನ್ನು ನೀಡಿ, ನಮ್ಮನ್ನು ದಾರಿ ತಪ್ಪಿಸುತ್ತಿದೆ. ಹೀಗಾಗಿ ನಾವೆಲ್ಲ ಒಗ್ಗೂಡಿ ಚರ್ಚಿಸಿದರೆ ಮಾತ್ರ ಮೀಸಲಾತಿಯ ಕುರಿತು ಸ್ಪಷ್ಟತೆ ಸಿಗುತ್ತದೆ ಎಂದು ಅವರು ಹೇಳಿದರು.
ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಸೀಮಿತಗೊಳಿಸಿಲ್ಲ. ಆದರೆ ಸುಪ್ರಿಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಮೀಸಲಾತಿಯನ್ನು ಶೇ.50ಕ್ಕೆ ಸೀಮಿತಗೊಳಿಸುವ ಕುರಿತು ಇಂದ್ರಸಹಾನಿ ಪ್ರಕರಣಕ್ಕಿಂತ ಮೊದಲು ಬಾಲಾಜಿ ವರ್ಸಸ್ ಮೈಸೂರು ರಾಜ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು ಎಂದರು.
ಮೀಸಲಾತಿಯ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ನೀಡಬಾರದು ಎಂಬುದು ಸಡಿಲಗೊಳಿಸಬಹುದಾದ ನಿಯಮವಾಗಿದೆ. ಸಡಿಲಗೊಳಿಸುವ ಸಂದರ್ಭದಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸಬೇಕು ಎಂದು ಅವರು ತಿಳಿಸಿದರು.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಸೀಟುಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕೋರ್ಸ್‍ಗಳಿಗೆ ನಿಗಧಿಪಡಿಸಿದ ಶುಲ್ಕವನ್ನು ಪರಿಶಿಷ್ಟ ಸಮುದಾಯದವರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನ್ಯಾಷನಲ್ ಲಾ ಆಫ್ ಸ್ಕೂಲ್‍ನ ಪ್ರಾಧ್ಯಪಕ ಬಾಬು ಮ್ಯಾಥ್ಯೂ ಮಾತನಾಡಿ, ನಮ್ಮ ದೇಶದಲ್ಲಿ ತಂತ್ರಜ್ಞಾನವನ್ನು ಬಳಸಿ ಆರ್ಥಿಕ ಅಭಿವೃದ್ಧಿ ಮಾಡಲಾಗುತ್ತಿದೆ. ಹಾಗಾಗಿ ನಮ್ಮಲ್ಲಿ ಶ್ರೀಮಂತರ ಸಂಪತ್ತು ಹೆಚ್ಚಾಗುತ್ತಿದೆ. ಶೇ.1ರಷ್ಟು ಶ್ರೀಮಂತರ ಮೇಲೆ ಶೇ.2ರಷ್ಟು ತೆರಿಗೆಯನ್ನು ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸೋವಿಯತ್ ಯುನಿಯನ್‍ನಂತೆ ವಿಸ್ಕøತ ಆರ್ಥಿಕ ಬೆಳವಣಿಗೆ ಆಗಬೇಕಾಗಿದೆ ಎಂದರು.
ನಮ್ಮಲಿ ಆರ್ಥಿಕ ಸಮಸ್ಯೆಯ ಜತೆಗೆ ಜಾತಿ ಹಾಗೂ ಹಿಂದುತ್ವ ಬಂದು ಕುಳಿತಿದೆ. ಇಂದು ಸಂವಿಧಾನ ಆಶಯ ಇಲ್ಲವಾಗಿದೆ. ಮಾಧ್ಯಮ ಸೇರಿದಂತೆ ಬಹುತೇಕ ಪ್ರಚಾರ ಸಾಮಗ್ರಿಗಳು ಅಂಬಾನಿ ಹಾಗೂ ಅದಾನಿ ಹಿಡಿತದಲ್ಲಿವೆ. ನಮ್ಮ ಸಂವಿಧಾನಕ್ಕೆ ಉಳಿಗಾಲ ಇಲ್ಲ. ಆದಷ್ಟು ಬೇಗ ನಾವು ಈ ಗಂಭೀರ ಬಿಕ್ಕಟ್ಟನ್ನು ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಮಾವಳ್ಳಿ ಶಂಕರ್, ಎಂ.ಸಿ.ವೇಣುಗೋಪಾಲ್, ಗೋಪಾಲಕೃಷ್ಣ ಹರಳಹಳ್ಳಿ, ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
‘ಸಂವಿಧಾನದ 103ನೆ ತಿದ್ದುಪಡಿಯ ಅನ್ವಯ ಇದುವರೆಗೂ ಮೀಸಲಾತಿಯನ್ನು ಪಡೆಯದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಿದೆ. ಆದರೆ ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ 2 ‘ಸಿ’ ಮತ್ತು 2 ‘ಡಿ’ ಎಂದು ಹೊಸದಾಗಿ ಸೇರ್ಪಡೆ ಮಾಡಿ ಇವಿಎಸ್ ಮೀಸಲಾತಿಯಲ್ಲಿ ಶೇ.7ರಷ್ಟು ಪಾಲನ್ನು ನೀಡುವುದಾಗಿ ಹೇಳುತ್ತಿದೆ. ರಾಜ್ಯ ಸರಕಾರಕ್ಕೆ ಈ ರೀತಿ ಹಂಚಲು ಅವಕಾಶ ಇಲ್ಲ’
-ನ್ಯಾ.ಎಚ್.ಎನ್. ನಾಗಮೋಹನ್ ದಾಸ್, ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ







