'ಸ್ಮಾರ್ಟ್ ಆ್ಯಂಡ್ ಡಿಜಿಟಲ್ ಸುರತ್ಕಲ್' ಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ

ಸುರತ್ಕಲ್: ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮುಂಭಾಗ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಈ ವೇಳೆ ಮಾತಾಡಿದ ಶಾಸಕ ಭರತ್ ಶೆಟ್ಟಿ, 'ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್' ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರು, ಸಿಸಿಟಿವಿ ವ್ಯವಸ್ಥೆ ಸೇರಿದಂತೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ನೇರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಗೆ ಸಂಪರ್ಕ ಕಲ್ಪಿಸುವಂತೆ ಎಮರ್ಜನ್ಸಿ ಕರೆ ವ್ಯವಸ್ಥೆಯನ್ನೂ ಮಾಡಲಾಗಿದೆ" ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಯೋಜನೆಯ ಮುಂದುವರಿದ ಭಾಗವಾಗಿ ಸುರತ್ಕಲ್ ಬೀಚ್ ನಲ್ಲಿ ಪ್ರವಾಸಿಗರ ವಿಹಾರಕ್ಕೆ ಪಾರ್ಕ್, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜನರು ಇವುಗಳನ್ನು ಯೋಗ್ಯ ರೀತಿಯಲ್ಲಿ ಬಳಸುವ ಮೂಲಕ ಸ್ವಚ್ಛತೆಯ ಕಡೆಗೆ ಗಮನ ನೀಡುವಂತಾಗಬೇಕು ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಎಸಿಪಿ ಎಸ್. ಮಹೇಶ್ ಕುಮಾರ್, ಸರ್ಕಲ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಗೋವಿಂದ ದಾಸ್ ಕಾಲೇಜ್ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಕಾರ್ಪೋರೇಟರ್ ವರುಣ್ ಚೌಟ, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ಲೋಕೇಶ್ ಬೊಳ್ಳಾಜೆ, ನಯನ ಆರ್. ಕೋಟ್ಯಾನ್, ಸಂಗೀತಾ ನಾಯಕ್, ಸರಿತಾ ಶಶಿಧರ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
ವಿಶೇಷತೆ: ಉಚಿತ ವೈಫೈ, ಮೂರು ಸಿಸಿಟಿವಿ, ಶುದ್ಧೀಕರಿಸಿದ ನೀರು, ಎಫ್ ಎಂ ರೇಡಿಯೋ, ಇನ್ವರ್ಟರ್ ವ್ಯವಸ್ಥೆ, ಎಸ್ ಓ ಎಸ್ ಬಟನ್, ಸಿಟಿ ಎಕ್ಸ್ ಸೂಪರ್ ಆಪ್, 2 ಫ್ಯಾನ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, 12 ಆಸನ ವ್ಯವಸ್ಥೆ, ಅಗ್ನಿಶಮನ ವ್ಯವಸ್ಥೆ, ಎಲ್ ಇ ಡಿ ಬೆಳಕಿನ ವ್ಯವಸ್ಥೆ, ಸೆಲ್ಫಿ ಪಾಯಿಂಟ್, ಮೊಬೈಲ್ ಮತ್ತು ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ಯೂಸ್ ಮಿ ಬಾಕ್ಸ್.