ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಹೆದ್ದಾರಿ ಕಾಮಗಾರಿ; ಸಂಚಾರ ಅಸ್ತವ್ಯಸ್ತ..!
ಬಹುನಿರೀಕ್ಷಿತ ರಾ.ಹೆದ್ದಾರಿ ಅಂಡರ್‌ಪಾಸ್ ಕಾಮಗಾರಿ ಪ್ರಾರಂಭ

ಉಡುಪಿ: ಇಲ್ಲಿನ ಕಲ್ಯಾಣಪುರ-ಸಂತೆಕಟ್ಟೆ ಬಳಿ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಬಹುಕಾಲದ ಬೇಡಿಕೆಯಾಗಿದ್ದ ಅಂಡರ್‌ಪಾಸ್ ನಿರ್ಮಾಣದ ಕಾಮಗಾರಿ ಜ.2 ಸೋಮವಾರದಿಂದ ಪ್ರಾರಂಭಗೊಂಡಿದೆ.
ಸಂತೆಕಟ್ಟೆ ಜಂಕ್ಷನ್ ಸಮೀಪದಿಂದ 150 ಮೀ. ದೂರದಲ್ಲಿ ವೆಹಿಕಲ್ ಅಂಡರ್ಪಾಸ್ (ವಿಯುಪಿ) ಕಾಮಗಾರಿ ನಡೆಸಲಾಗುತ್ತಿದ್ದು ಚಾಲನೆ ಸಿಕ್ಕಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಎರಡೂ ಕಡೆಯ ಹೆದ್ದಾರಿಯನ್ನು ಮುಚ್ಚಿ ಅಗೆಯಲಾಗಿದೆ.
ವಾಹನಗಳ ಪರ್ಯಾಯ ಸಂಚಾರಕ್ಕಾಗಿ ಸಂತೆಕಟ್ಟೆ ಜಂಕ್ಷನ್ ಬಳಿಯಿಂದ ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಇದರಿಂದಾಗಿ ಕುಂದಾಪುರ-ಉಡುಪಿ ಹಾಗೂ ಉಡುಪಿ-ಕುಂದಾಪುರ ಮಾರ್ಗದ ಎಲ್ಲಾ ವಾಹನಗಳ ಸಂಚಾರ ಅಸ್ತವ್ಯಸ್ತ ಆಗುತ್ತಿದ್ದು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಕಿರಿಕಿರಿ ವಾಹನ ಚಾಲಕರನ್ನು, ಪ್ರಯಾಣಿಕರನ್ನು ಬಾಧಿಸತೊಡಗಿದೆ.
ಕಾಮಗಾರಿ ಆರಂಭದ ದಿನವೇ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದ್ದು ಇನ್ನೂ ಕಾಮಗಾರಿ ಮುಗಿಯಲು ಹಲವು ತಿಂಗಳುಗಳೇ ಬೇಕಾಗುವ ಸಾಧ್ಯತೆಗಳಿದೆ.
ಈ ಮಾರ್ಗದಲ್ಲಿ ಸಂಚಾರ ದಟ್ಟಣೆ, ಸಂತೆಕಟ್ಟೆ ಜಂಕ್ಷನ್‌ನಲ್ಲಿ ನಾಲ್ಕೈದು ಕಡೆಗಳಿಂದ ಒಮ್ಮೆಲೇ ವಾಹನಗಳು ನುಗ್ಗಿ ಬಂದು ಪ್ರತಿದಿನ ಉಂಟಾಗು ತ್ತಿರುವ ಅಪಘಾತ ಹಾಗೂ ಜೀವಹಾನಿಯನ್ನು ತಪ್ಪಿಸಲು ಬಹುಕಾಲದ ಬೇಡಿಕೆಯಾದ ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್ (ಓವರ್‌ಬ್ರಿಜ್ ಬೇಡಿಕೆ ತಿರಸ್ಕೃತಗೊಂಡಿದೆ) ನಿರ್ಮಾಣದ ಘೋಷಣೆ ವರ್ಷದ ಹಿಂದೆಯೇ ಆಗಿದ್ದು, ಈಗ ಕಾಮಗಾರಿ ಆರಂಭಗೊಳ್ಳುತ್ತಿದೆ.
ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿ ಸಂಭಾವ್ಯ ಅವಘಡಗಳನ್ನು ತಪ್ಪಿಸಬೇಕು ಎಂದು ವಾಹನಗಳ ಚಾಲಕರು, ಸವಾರರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.









