4 ಇಂಜಿನ್ ಸರಕಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.2: ನಾವು ಕೇವಲ ಡಬಲ್ ಇಂಜಿನ್ ವಿರುದ್ಧವಲ್ಲ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲಿರುವ ಒಟ್ಟು ನಾಲ್ಕು ಇಂಜಿನ್ ಬಿಜೆಪಿ ಸರಕಾರಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಿಂದ 25 ಸಂಸದರಿದ್ದರೂ ಈ ರಾಜ್ಯದ ಕುಡಿಯುವ ನೀರು, ರೈತರ ಸಮಸ್ಯೆಗೆ ಪರಿಹಾರ ನೀಡಲುಆಗುತ್ತಿಲ್ಲ. ಹಾಗಾದರೆ ನಿಮಗೆ ಅಧಿಕಾರ ಯಾಕೆ ಬೇಕು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು.
ಸೋಮವಾರ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಮಹಾದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿದ ಅವರು, ಎಚ್.ಕೆ.ಪಾಟೀಲ್ ನೀರಾವರಿ ಮಂತ್ರಿಯಾಗಿದ್ದಾಗ ಮಹಾದಾಯಿ ಯೋಜನೆಗೆ ಸ್ವರೂಪ ಕೊಟ್ಟಿದ್ದರು ಎಂದರು.
ಯಡಿಯೂರಪ್ಪ ಜೇಬಿಂದ ಚೀಟಿ ತೆಗೆದು ತೋರಿಸಿದ್ದು ಆಯಿತು, ಶೆಟ್ಟರ್ ಅಧಿಕಾರ ಮಾಡಿ ಆಯಿತು, ಬೊಮ್ಮಾಯಿ ಅಧಿಕಾರಕ್ಕೆ ಬಂದಿದ್ದು ಆಯಿತು. ಆದರೆ ಈ ಕಳಸಾ ಬಂಡೂರಿ ವಿಚಾರದಲ್ಲಿ ಬರೀ ಶೋ ಮಾಡುತ್ತಿದ್ದಾರೆ. ನಿಮ್ಮ ಡಿಪಿಆರ್ ಯಾರಿಗೆ ಬೇಕು? ಈ ಭಾಗದ ಜನರಿಗೆ ಕುಡಿಯಲು ನೀರು ಸಿಗಬೇಕು, ರೈತರ ಬದುಕು ಹಸನಾಗಬೇಕು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ನಂತರ ಎರಡು ತಂಡವಾಗಿ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ನಾವು ಕೊಡುವ ಮಾತು ಉಳಿಸಿಕೊಳ್ಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. ಇವರ ಚರಿತ್ರೆಯೆ ದ್ರೋಹದ ಮೇಲೆ ನಿಂತಿದೆ. 2010ರಲ್ಲಿ ಮಹಾದಾಯಿ ನ್ಯಾಯಾಧಿಕರಣ ಮಾಡಲಾಯಿತು. 2002ರಲ್ಲಿ ವಾಜಪೇಯಿ ಸರಕಾರ ಈ ಯೋಜನೆಗೆ ಅಡ್ಡಿಪಡಿಸಿ ದ್ರೋಹಬಗೆಯಿತು. ಇದೇ ದೋಖೆಬಾಜಿಗಳು 8 ವರ್ಷಗಳಿಂದ ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿದ್ದರೂ ಈ ಯೋಜನೆಯನ್ನು ಪೂರ್ಣಗೊಳಿಸುವುದಿರಲಿ, ಆರಂಭವನ್ನೇ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆ ಸಂಬಂಧ ಇದುವರೆಗೂ ಈ ಸರಕಾರ ಅರಣ್ಯ, ಪರಿಸರ ಇಲಾಖೆಯ ಅನುಮತಿ ಪತ್ರ ಪಡೆದಿಲ್ಲ. ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಒಂದು ಪ್ರಮುಖ ಭಾಗವಾಗಿದೆ. ಇವರಿಂದ ಮಹಾದಾಯಿ ನೀರು ತರಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಂದಿನ ಸರಕಾರ ರಚಿಸಿದ ಮೊದಲ ಸಂಪುಟದಲ್ಲಿ 500 ಕೋಟಿ ರೂ.ಅನುದಾನ ನೀಡಿ ಯೋಜನೆಗೆ ಚಾಲನೆ ನೀಡಲಾಗುವುದು. ಒಟ್ಟು 3 ಸಾವಿರ ಕೋಟಿ ರೂ.ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಅವರು ವಾಗ್ದಾನ ನೀಡಿದರು.
ಸಮಾವೇಶದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.








