ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ 5 ವರ್ಷಗಳಲ್ಲಿ 2ಲಕ್ಷ ಕೋಟಿ ರೂ.ಅನುದಾನ: ಸಿದ್ದರಾಮಯ್ಯ
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಹದಾಯಿ ಜಲ-ಜನಾಂದೋಲನ

ಬೆಂಗಳೂರು, ಜ.2: ನಾವು 2023ರಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಬಾಕಿ ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ ಪೂರೈಸಲು ಎರಡು ಲಕ್ಷ ಕೋಟಿ ರೂ.ಅನುದಾನ ನೀಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸೋಮವಾರ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಮಹದಾಯಿ ಜಲ-ಜನಾಂದೋಲನದಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲಾ ಯೋಜನೆಗೆ ಈ ಹಿಂದೆ ಇದ್ದಂತಹ 93 ಕೋಟಿ ರೂ. ಯೋಜನಾ ವೆಚ್ಚ ಇಂದು 1,677 ಕೋಟಿ ರೂ.ಆಗಿದೆ. ಇದಕ್ಕೆ ಬಿಜೆಪಿ ಸರಕಾರದ ವಿಳಂಬ ನೀತಿ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ ಎಂದರು.
ಈ ಯೋಜನೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಲು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಮಾಡಲು 15 ದಿನಗಳ ಹಿಂದೆ ನಾವು ತೀರ್ಮಾನ ಮಾಡಿದ್ದೆವು. ನಮ್ಮ ಘೋಷಣೆ ಬಳಿಕ ಬಿಜೆಪಿಯವರು ಈ ಯೋಜನೆಗೆ ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
2020ರ ಫೆ.27ರಂದು ಗೆಜೆಟ್ ನೋಟಿಫಿಕೇಷನ್ ಆಗಿದೆ. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರದಲ್ಲಿ ನಿಮ್ಮದೇ ಸರಕಾರ ಇದ್ದರೂ 2 ವರ್ಷ 10 ತಿಂಗಳು ಆದರೂ ಯಾಕೆ ಕಾಮಗಾರಿ ಪ್ರಾರಂಭ ಮಾಡಲಿಲ್ಲ? 2018ರ ಆ.14ರಂದು ನ್ಯಾಯಾಧೀಕರಣ ತೀರ್ಪು ನೀಡಿದೆ. ನಾವು, ಗೋವಾ, ಮಹಾರಾಷ್ಟ್ರದವರು ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.
2013ರಲ್ಲಿ ನಾವು ಅದಿಕಾರಕ್ಕೆ ಬಂದಾಗ ನ್ಯಾಯಾಧಿಕರಣದ ಮುಂದೆ ಸಮರ್ಥ ಸಾಕ್ಷ್ಯ ಒದಗಿಸಿ ವಾದ ಮಂಡಿಸಿದ ಪರಿಣಾಮ ನಮಗೆ 13.42 ಟಿಎಂಸಿ ನೀರು ಸಿಕ್ಕಿದೆ. ಗೋವಾದವರಿಗೆ 24 ಟಿಎಂಸಿ, ಮಹಾರಾಷ್ಟ್ರದವರಿಗೆ 1.3 ಟಿಎಂಸಿ ಸಿಕ್ಕಿತು. ಈ ತೀರ್ಪು ಸಮಾಧಾನವಿಲ್ಲದಿದ್ದರೂ ಅದನ್ನು ಒಪ್ಪಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಸಿಎಂ ಆಗಿದ್ದಾಗ ಸರ್ವಪಕ್ಷ ನಿಯೋಗ ಕರೆದುಕೊಂಡು ಪ್ರಧಾನಿ ಬಳಿ ಹೋಗಿದ್ದೆ. ಪ್ರಹ್ಲಾದ್ ಜೋಶಿ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ರೈತ ಮುಖಂಡರು, ಸ್ವಾಮೀಜಿಗಳು ಬಂದಿದ್ದರು. ಗೋವಾ, ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಅಧಿಕಾರದಲ್ಲಿದೆ. ನಿಮ್ಮ ಮುಖ್ಯಮಂತ್ರಿಗಳನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ಕೈಮುಗಿದು ಪ್ರಾರ್ಥನೆ ಮಾಡಿದೆ. ಆದರೂ ಒಪ್ಪಲಿಲ್ಲ ಎಂದು ಅವರು ಹೇಳಿದರು.
ಈ ವೇಳೆ ಬಿಜೆಪಿ ನಾಯಕರು ಒಳಗಡೆ ಹೋಗಿ ಮೋದಿಗೆ ಸಿದ್ದರಾಮಯ್ಯ ಮನವಿ ಒಪ್ಪಬೇಡಿ ಎಂದು ಹೇಳಿ ಬಂದರು. ಇದಕ್ಕೆ ಸ್ವಾಮೀಜಿಗಳು, ರೈತ ಮುಖಂಡರೇ ಸಾಕ್ಷಿ. ಬಿಜೆಪಿ ನಾಯಕರಿಗೆ ನಿಮ್ಮ ಢೋಂಗಿತನ ಬಿಟ್ಟು, ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಿರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
2018ರಲ್ಲಿ 1.50 ಲಕ್ಷ ಕೋಟಿ ನೀರಾವರಿಗೆ ನೀಡಲಾಗುವುದು ಎಂದು ಹೇಳಿದ್ದೀರಿ. ಇಲ್ಲಿಯವರೆಗೂ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಇನ್ನು 1 ಲಕ್ಷ ಕೋಟಿ ಏನಾಯ್ತು? ಕಳಸಾ ಬಂಡೂರಿ ಜನೆ ಯಾಕೆ ಆರಂಭಿಸಲಿಲ್ಲ. ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದು ಅದಲ್ಲಿ ಶೇ.10ರಷ್ಟು ಜಾರಿ ಮಾಡಲು ಆಗಿಲ್ಲ ಎಂದು ಅವರು ಕಿಡಿಗಾರಿದರು.








