ಯಕ್ಷಗಾನ ಸೊಗಡಿನ ‘ವೈಶಂಪಾಯನ ತೀರ’ ಜ.6ರಂದು ತೆರೆಗೆ

ಉಡುಪಿ: ‘ಕಾಂತಾರ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಪ್ರಾದೇಶಿಕ ಸಂಸ್ಕೃತಿಯ ಸೊಗಡಿನ ಚಲನಚಿತ್ರಗಳು ಹೆಚ್ಚೆಚ್ಚು ನಿರ್ಮಾಣ ಗೊಳ್ಳುತಿದ್ದು, ಇದೀಗ ಕರಾವಳಿಯ ಕಲೆ ಯಕ್ಷಗಾನದ ಹಿನ್ನೆಲೆಯೊಂದಿಗೆ ‘ವೈಶಂಪಾಯನ ತೀರ’ ಕನ್ನಡ ಚಲನಚಿತ್ರ ಇದೇ ಜ.6ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ, ಯಕ್ಷಗಾನ ಹಾಗೂ ರಂಗಭೂಮಿಯ ಕಲಾವಿದ ಶೃಂಗೇರಿಯ ರಮೇಶ್ ಬೇಗಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಶಂಪಾಯನತೀರ ಚಿತ್ರವು ಜ.6ರಂದು ಉಡುಪಿ, ಮಣಿಪಾಲ, ಕುಂದಾಪುರ, ಪಡುಬಿದ್ರೆ, ಮಂಗಳೂರಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆಗೊ ಳ್ಳಲಿದೆ. ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ಆಡಿಯೋ ಕ್ಯಾಸೆಟ್ ಉದ್ಯಮಿ ಆರ್.ಸುರೇಶ್‌ಬಾಬು ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.
ಉತ್ತರ ಕನ್ನಡದ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಜನಪ್ರಿಯ ಸಣ್ಣ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಯಕ್ಷಗಾನ ಕಲಾವಿದರ ನಡುವೆ ನಡೆಯುವ ಸಂಘರ್ಷದ ಕಥೆಯ ಎಳೆಯನ್ನು ಚಿತ್ರ ಹೊಂದಿದ್ದು, ಯಕ್ಷಗಾನವನ್ನು ಸಿನಿಮಾಕ್ಕೆ ಹೊಂದುವಂತೆ ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧ, ಮಲೆನಾಡ ಪರಿಸರದ ಭೂಗತ ಜಗತ್ತಿನ ನಿಗೂಢತೆಯನ್ನೂ ಚಿತ್ರಿಸಲಾಗಿದೆ ಎಂದು ರಮೇಶ್ ಬೇಗಾರ್ ವಿವರಿಸಿದರು.
ಕಥೆಯ ಚಿತ್ರೀಕರಣ ಶೃಂಗೇರಿಯ ಸುತ್ತಮುತ್ತ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕಥೆ ಮಲೆನಾಡಿನ ಘಟ್ಟ ಭಾಗದಲ್ಲಿ ನಡೆಯಲಿದ್ದು, ಮಲೆನಾಡು ಹಾಗೂ ಕುಂದಾಪುರ ಕನ್ನಡದ ಭಾಷಾ ಸೊಗಡನ್ನು ಅಳವಡಿಸ ಲಾಗಿದೆ.
ಚಿತ್ರದಲ್ಲಿ ಇದೇ ಮೊದಲ ಬಾರಿ ಕುಂದಾಪುರದ ಜನಪ್ರಿಯ ಹಾಸ್ಯ ಕಲಾವಿದರಾ ಕುಳ್ಳಪ್ಪು ಸತೀಶ್ ಹಾಗೂ ಸಂತೋಷ್ ಪೈ ಪ್ರಮುಖ ಪಾತ್ರದಲ್ಲಿದ್ದಾರೆ. ಸಾಲಿಗ್ರಾಮದ ಮೇಳದ ಪ್ರಸಿದ್ಧ ವೃತ್ತಿ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಕೋಟ ಶಿವಾನಂದ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಬಡಗುತಿಟ್ಟಿನ ಪ್ರಸಿದ್ಧ ಭಾಗವತ ರಾಘವೇಂದ್ರ ಮಯ್ಯ ಅವರು ಮೇಳದ ಭಾಗವತರ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದರು.
ರವೀಶ್ ಹೆಗ್ಡೆ ಐನ್‌ಬೈಲ್ ಚಿತ್ರದ ನಾಯಕ ನಟರಾಗಿದ್ದು, ಜಿಲ್ಲೆಯ ಪ್ರಸಿದ್ಧ ಹೊಟೇಲ್ ಉದ್ಯಮಿ ವೈಜಯಂತಿ ವಾಸುದೇವ ಅಡಿಗ ಅವರು ನಾಯಕಿಯಾಗಿ ನಟಿಸಿದ್ದಾರೆ. ಪ್ರಸಿದ್ಧ ನಟ ಗಿಳಿಯಾರು ಪ್ರಮೋದ್ ಶೆಟ್ಟಿ ಅವರೊಂದಿಗೆ ರಮೇಶ್ ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ ಹೊಸ್ಕೋಟಿ, ಶೃಂಗೇರಿ ರಾಮಣ್ಣ, ನಯನ, ವಿಶ್ವನಾಥ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ ಎಂದು ಬೇಗಾರ್ ತಿಳಿಸಿದರು.
ಚಿತ್ರಕ್ಕೆ ಶೃಂಗೇರಿಯ ಶಶಿರ್ ಛಾಯಾಗ್ರಹಣ, ಶ್ರೀನಿಧಿ ಕೊಪ್ಪ ಸಂಗೀತ ನಿರ್ದೇಶನ, ಅವಿನಾಶ್ ಸಂಕಲನವಿದೆ. ಸದ್ಯಕ್ಕೆ ಚಿತ್ರವನ್ನು ಮಲ್ಟಿಫ್ಲೆಕ್ಸ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೇಡಿಕೆ ಬಂದರೆ ಸಿಂಗಲ್ ಸ್ಕೃಿನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕರಾದ ರಮೇಶ್ ಬೇಗಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಮಯ್ಯ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಹಾಗೂ ಕೋಟ ಶಿವಾನಂದ ಉಪಸ್ಥಿತರಿದ್ದರು.







