ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ವಂಚನೆ: ಆರೋಪಿ ಬಿ.ವಿ. ಲಕ್ಷ್ಮೀನಾರಾಯಣ 5 ದಿನ ಪೊಲೀಸ್ ಕಸ್ಟಡಿಗೆ

ಉಡುಪಿ: ಸೊಸೈಟಿಯಲ್ಲಿ ಹಣವಿಟ್ಟ ಠೇವಣಿದಾರರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಇಂದ್ರಾಳಿ ನಿವಾಸಿ ಬಿ.ವಿ.ಲಕ್ಷ್ಮೀನಾರಾಯಣ ಉಪಾಧ್ಯಾಯ (63) ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದ ಮಾರುತಿ ವಿಥಿಕಾ ರಸ್ತೆಯಲ್ಲಿರುವ ಕೃಷ್ಣಾಪುರ ಮಠ ಬಿಲ್ಡಿಂಗ್‌ನಲ್ಲಿ 2013ರಲ್ಲಿ ಪ್ರಾರಂಭ ಗೊಂಡ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಬಿ.ವಿ ಲಕ್ಷ್ಮೀನಾರಾಯಣ ಇದರ ಅಧ್ಯಕ್ಷರಾಗಿದ್ದರು. ಸಾರ್ವಜನಿಕರಿಗೆ ಶೇ.10ರಿಂದ ಶೇ.12ರವರೆಗೆ ಬಡ್ಡಿದರ ನೀಡುವುದಾಗಿ ಸುಮಾರು 700 ಜನರಿಂದ 40 ರಿಂದ 50 ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದು ಜೂನ್ 2022 ರಿಂದ ಹೂಡಿಕೆದಾರರಿಗೆ ಬಡ್ಡಿಯನ್ನು ನೀಡದೇ ಕಛೇರಿಯನ್ನು ಮುಚ್ಚಿಕೊಂಡು ಹೋದ ಬಗ್ಗೆ ಕಾರ್ಕಳ ಮೂಲದ ಪ್ರಕಾಶ್ ಕಾಮತ್ ಎನ್ನುವರು ಡಿ.21 ರಂದು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಬಿ.ವಿ ಲಕ್ಷ್ಮೀನಾರಾಯಣ ನ್ಯಾಯಾಂಗ ಬಂಧನದಲ್ಲಿದ್ದು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸೆನ್ ಠಾಣೆ ಪೊಲೀಸರು ಐದು ದಿನಗಳಕಾಲ ಕಸ್ಟಡಿಗೆ ಪಡೆದಿದ್ದಾರೆ.





