ಕಾಚರಕನಹಳ್ಳಿ ಬುಡಬುಡಿಕೆ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಸಲು ಒತ್ತಾಯ

ಬೆಂಗಳೂರು, ಜ.2: ಇಲ್ಲಿನ ಕಾಚರಕನಹಳ್ಳಿ ಗ್ರಾಮದ ಕೆರೆಯಂಗಳ ಜಾಗದಲ್ಲಿದ್ದ ವಾಸ ಮಾಡುತ್ತಿದ್ದ ಬುಡಬುಡಿಕೆ ಜನಾಂಗದವರನ್ನು ಡಿ.28ರಂದು ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ 60ಕ್ಕೂ ಹೆಚ್ಚು ಶೆಡ್‍ಗಳನ್ನು ನೆಲಸಮಗೊಳಿಸಿದ ಹಿನ್ನೆಲೆ, ನಿರ್ಗತಿಕ ಕುಟುಂಬಗಳಿಗೆ ಕೂಡಲೇ ಪರ್ಯಾಯ ವಸತಿ ಕಲ್ಪಿಸಬೇಕೆಂದು ವಿಸಿಕೆ ಸಂಘಟನೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಸೋಮವಾರ ವಿಸಿಕೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ ನೇತೃತ್ವದಲ್ಲಿ ಬುಡಬುಡಿಕೆ ಜನಾಂಗದ ನೂರು ಮಂದಿ ನಗರ ಜಿಲ್ಲಾಧಿಕಾರಿ ಕಚೇರಿಯ ಬಳಿ ಧರಣಿ ನಡೆಸಿದರು. ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ.153ರ ಜಾಗದಲ್ಲಿ ನಾಲ್ಕು ಕೊಳಚೆ ಪ್ರದೇಶಗಳಿದ್ದು, ಪ್ರಧಾನಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಬಡ ಕುಟುಂಬಗಳಿಗೆ ಸರಕಾರ ಹಕ್ಕುಪತ್ರ ನೀಡಬೇಕು. ಅಲ್ಲದೆ ಒಳಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆಗಳನ್ನು ಕೂಡಲೇ ನಿರ್ಮಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಯಾರೂ ಇಲ್ಲದ ಸಮಯ ನೋಡಿಕೊಂಡು ನ್ಯಾಯಾಲಯದ ತಡೆಯಾಜ್ಞೆಯಿರುವ ಜಾಗದಲ್ಲಿ ಏಕಾಏಕಿ ದಾಳಿ ನಡೆಸುವ ಮೂಲಕ ಜಾಗವನ್ನು ನೆಲಸಮ ಮಾಡಿರುವುದು ಖಂಡನೀಯ. ಪ್ರತಿನಿತ್ಯ ಭಿಕ್ಷೆ ಬೇಡಿ ತಿನ್ನುವ ಬುಡಬುಡಿಕೆ ಜನಾಂಗದವರಿಗೆ ಕೂಡಲೇ ಸರಕಾರ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.





