ವಿಶ್ವದ ಮೂರನೇ ಒಂದು ಭಾಗಕ್ಕೆ ಆರ್ಥಿಕ ಹಿಂಜರಿತದ ಆಘಾತ: ಐಎಂಎಫ್ ಎಚ್ಚರಿಕೆ

ವಾಷಿಂಗ್ಟನ್, ಜ.2: ಈ ವರ್ಷ ಜಗತ್ತಿನ ಮೂರನೇ ಒಂದರಷ್ಟು ಆರ್ಥಿಕತೆಗೆ ಹಿಂಜರಿತದ ಬಿಸಿ ತಟ್ಟಲಿದ್ದು ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಚೀನಾದ ಅರ್ಥವ್ಯವಸ್ಥೆ ನಿಧಾನಗತಿಯಲ್ಲಿರುವುದರಿಂದ 2023 ಕಳೆದ ವರ್ಷಕ್ಕಿಂತ ಕಠಿಣವಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಸಿಬಿಎಸ್ ಟಿವಿ ಕಾರ್ಯಕ್ರಮ ‘ಫೇಸ್ ದಿ ನೇಷನ್’ನಲ್ಲಿ ಮಾತನಾಡಿದ ಐಎಂಎಫ್ ಮುಖ್ಯಸ್ಥೆ ಕ್ರಿಸ್ತಲಿನಾ ಜಾರ್ಜಿಯೆವಾ, ಈ ವರ್ಷ ಮೂರನೇ ಒಂದರಷ್ಟು ಜಾಗತಿಕ ಅರ್ಥವ್ಯವಸ್ಥೆಗೆ ಹಿಂಜರಿತದ ಬಿಸಿ ತಾಗುವ ನಿರೀಕ್ಷೆಯಿದೆ. ಆರ್ಥಿಕ ಹಿಂಜರಿತದಲ್ಲಿಲ್ಲದ ದೇಶಗಳಲ್ಲಿಯೂ ಸಹ, ನೂರಾರು ದಶಲಕ್ಷ ಜನರಿಗೆ ಇದು ಆರ್ಥಿಕ ಹಿಂಜರಿತದಂತೆಯೇ ಭಾಸವಾಗಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ ನಲ್ಲಿನ ಸಂಘರ್ಷ 10 ತಿಂಗಳ ಬಳಿಕವೂ ಅಂತ್ಯಗೊಳ್ಳುವ ಲಕ್ಷಣ ಗೋಚರಿಸದ ಸಂದರ್ಭದಲ್ಲಿ ಐಎಂಎಫ್ನ ಈ ಎಚ್ಚರಿಕೆ ಹೊರಬಿದ್ದಿದೆ. ಹೆಚ್ಚುತ್ತಿರುವ ಹಣದುಬ್ಬರ, ಅಧಿಕ ಬಡ್ಡಿದರ, ಚೀನಾದಲ್ಲಿ ಮತ್ತೆ ಕೊರೋನ ಸೋಂಕು ಉಲ್ಬಣಗೊಂಡಿರುವುದು ಆರ್ಥಿಕ ಹಿಂಜರಿತದ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ‘ಜಾಗತಿಕ ಬೆಳವಣಿಗೆಯು 2021ರಲ್ಲಿ 6% ಇದ್ದರೆ, 2022ರಲ್ಲಿ 3.2%ಕ್ಕೆ ಮತ್ತು 2023ರಲ್ಲಿ 2.7%ಕ್ಕೆ ನಿಧಾನವಾಗಲಿದೆ ಎಂದು ಮುನ್ಸೂಚಿಸಲಾಗಿದೆ. 2021ರಿಂದ (ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್ ಸಾಂಕ್ರಾಮಿಕದ ತೀವ್ರ ಹಂತ ಹೊರತುಪಡಿಸಿ) ಇದು ಅತ್ಯಂತ ದುರ್ಬಲ ಬೆಳವಣಿಗೆಯ ವಿವರವಾಗಿದೆ’ ಎಂದು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಐಎಂಎಫ್ ಹೇಳಿತ್ತು.
ದೇಶದಲ್ಲಿ ಸರಕಾರ ವಿರೋಧಿ ಪ್ರತಿಭಟನೆಯ ಅಲೆ ಕಾಣಿಸಿಕೊಂಡ ಬಳಿಕ ಎಚ್ಚೆತ್ತ ಚೀನಾ, ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟು ತನ್ನ ಆರ್ಥಿಕತೆಯನ್ನು ಮುಕ್ತಗೊಳಿಸಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಚೀನಾಕ್ಕೆ ಇದು ಕಠಿಣವಾಗಿರುತ್ತದೆ ಮತ್ತು ಚೀನಾದ ಬೆಳವಣಿಗೆಯ ಮೇಲೆ, ಪ್ರದೇಶದ ಮೇಲೆ, ಜಾಗತಿಕ ಬೆಳವಣಿಗೆಯ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕ್ರಿಸ್ತಲಿನಾ ಜಾರ್ಜಿಯೆವಾ ಹೇಳಿದ್ದಾರೆ.







