ಹೆಚ್ಚುತ್ತಿರುವ ಆಹಾರ ಬೇಡಿಕೆಗೆ ರಾಗಿಯಿಂದ ಪರಿಹಾರ: ಎಸ್. ಜೈಶಂಕರ್

ವಿಯೆನ್ನ, ಜ.2: ದಿನನಿತ್ಯ ಸೇವಿಸುವ ಅಕ್ಕಿ ಮತ್ತು ಗೋಧಿಗಿಂತ ರಾಗಿಯು ಹೆಚ್ಚು ಆರೋಗ್ಯಕರವಾಗಿದೆ ಮತ್ತು ಜಾಗತಿಕ ಆಹಾರ ಕೊರತೆಯ ಬಗ್ಗೆ ಚಿಂತಿಸುತ್ತಿರುವ ಸಮಯದಲ್ಲಿ ಸಂಪೂರ್ಣವಾಗಿ ವಿಭಿನ್ನ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಹೆಚ್ಚುತ್ತಿರುವ ಆಹಾರ ಬೇಡಿಕೆಗೆ ರಾಗಿಯಂತಹ ಸಿರಿಧಾನ್ಯಗಳು ಪರಿಹಾರ ಒದಗಿಸಬಹುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಆಸ್ಟ್ರಿಯದ ರಾಜಧಾನಿ ವಿಯೆನ್ನಾದಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ರಾಗಿಯನ್ನು ಉತ್ಪಾದಿಸಬಹುದು ಮತ್ತು ಇದು ವಿಶ್ವದಾದ್ಯಂತ ಹೆಚ್ಚುತ್ತಿರುವ ಆಹಾರ ಬೇಡಿಕೆಗೆ ಪರಿಹಾರ ಆಗಬಹುದು ಎಂದಿದ್ದಾರೆ. ಅಂತರಾಷ್ಟ್ರೀಯ ರಾಗಿ ವರ್ಷದ ಅಂಗವಾಗಿ ದೇಶದಾದ್ಯಂತ ರಾಗಿ ಕೇಂದ್ರಿತ ಪ್ರಚಾರ ಚಟುವಟಿಕೆಗೆ ಯೋಜನೆ ರೂಪಿಸಲಾಗಿದೆ ಎಂದು ಭಾರತ ಸರಕಾರ ಜನವರಿ 1ರಂದು ಘೋಷಿಸಿದೆ.
ಸಿರಿಧಾನ್ಯ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದೆ. ಇದಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ ಮತ್ತು ಹೆಚ್ಚು ಇಂಗಾಲ-ಸ್ನೇಹಿಯಾಗಿದೆ. ನಾವಿದನ್ನು ಸುಲಭವಾಗಿ ಬೆಳೆಯಬಹುದು ಮತ್ತು ಇದು ನಮ್ಮ ಬೆಳೆಯುತ್ತಿರುವ ಆಹಾರ ಬೇಡಿಕೆಗೆ ಪರಿಹಾರವಾಗಿದೆ. ನಮಗಷ್ಟೇ ಅಲ್ಲ, ಆಫ್ರಿಕಾ, ಏಶ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳ ಹಲವು ಭಾಗಗಳಲ್ಲಿ ಇದು ಹೆಚ್ಚುತ್ತಿರುವ ಆಹಾರದ ಬೇಡಿಕೆಗೆ ಪರಿಹಾರವಾಗಬಹುದು . ಭಾರತದಲ್ಲಿ ರಾಗಿ ಪ್ರಾಥಮಿಕವಾಗಿ ಖಾರಿಫ್ ಬೆಳೆಯಾಗಿದ್ದು ಇದಕ್ಕೆ ಹೆಚ್ಚಿನ ನೀರು ಅಥವಾ ಗೊಬ್ಬರದ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ.
ಸಿಂಧೂ ಕಣಿವೆ ನಾಗರಿಕತೆಯ ಸಂದರ್ಭದಲ್ಲೂ ಭಾರತದಲ್ಲಿ ರಾಗಿ ಉಪಯೋಗಿಸುತ್ತಿರುವುದಕ್ಕೆ ಪುರಾವೆಗಳಿವೆ. 130ಕ್ಕೂ ಅಧಿಕ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದ್ದು ಏಶ್ಯಾ ಮತ್ತು ಆಫ್ರಿಕಾದ 50%ಕ್ಕೂ ಅಧಿಕ ಜನರ ಸಾಂಪ್ರದಾಯಿಕ ಆಹಾರವಾಗಿದೆ.