ಅಮೆರಿಕ ಪೌರತ್ವ ಮರುಸ್ಥಾಪನೆಗೆ ಗೊತಬಯ ರಾಜಪಕ್ಸ ಅರ್ಜಿ

ಕೊಲಂಬೊ, ಜ.2: ತನ್ನ ಅಮೆರಿಕ ಪೌರತ್ವವನ್ನು ಮರುಸ್ಥಾಪಿಸುವಂತೆ ಕೋರಿ ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೊತಬಯ ರಾಜಪಕ್ಸ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಯಾವುದೇ ದೇಶದಲ್ಲಿ ಆಶ್ರಯ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಗೊತಬಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ನಿಕಟವರ್ತಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಶ್ರೀಲಂಕಾದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ದೇಶದ ಅಧ್ಯಕ್ಷರಾಗಿದ್ದ ಗೊತಬಯ ರಾಜಪಕ್ಸ ಕಳೆದ ಜುಲೈಯಲ್ಲಿ ದೇಶದಿಂದ ಪಲಾಯನ ಮಾಡಿದ್ದರು. ಆದರೆ ಮಾಲ್ದೀವ್ಸ್, ಸಿಂಗಾಪುರ, ಥೈಲ್ಯಾಂಡ್‌ನಲ್ಲಿ ಕೆಲ ದಿನ ನೆಲೆಸಿದ್ದ ಬಳಿಕ ಅನಿವಾರ್ಯವಾಗಿ ದೇಶಕ್ಕೆ ಹಿಂದಿರುಗಿದ್ದರು. ಈ ಮಧ್ಯೆ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಶ್ರೀಲಂಕಾದ ಸಂವಿಧಾನದ ನಿಯಮದಂತೆ ಅವಳಿ ಪೌರತ್ವ ಹೊಂದಿದವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅನರ್ಹರಾಗಿರುವುದರಿಂದ 2019ರಲ್ಲಿ ಗೊತಬಯ ತಮ್ಮ ಅಮೆರಿಕ ಪೌರತ್ವ ತೊರೆದಿದ್ದರು. ಇದೀಗ ಪೌರತ್ವ ಮರುಸ್ಥಾಪನೆಗೆ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.