ಜೀವನ ಅತ್ಯುತ್ತಮವಾಗಬೇಕಾದರೆ ಇತರರಿಗೂ ನೆರವಾಗಬೇಕು: ರಶೀದ್ ಗಝ್ಝಾಲಿ
ಅಂಜುಮನ್ ಶತಮಾನೋತ್ಸವ ಸಮಾರೋಪ ಸಮಾರಂಭ

ಭಟ್ಕಳ: ಜೀವನದಲ್ಲಿ ನೀವು ಸಂತೋಷವಾಗಿದ್ದಾಗ ಮಾತ್ರ ಬದುಕು ಉತ್ತಮವಾಗಲು ಸಾಧ್ಯ. ಆದರೆ, ಜೀವನ ಅತ್ಯುತ್ತಮವಾಗಬೇಕಾದರೆ ನೀವು ಇತರರಿಗೂ ನೆರವಾಗಿರುವವರಾಗಬೇಕೆಂದು ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಲೀಡರ್‌ಶಿಪ್ ಕ್ಯಾಲಿಕಟ್‌ನ ಸಂಸ್ಥಾಪಕ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ರಶೀದ್ ಗಝ್ಝಾಲಿ ಹೇಳಿದ್ದಾರೆ.
ಭಟ್ಕಳದ ಪ್ರತಿಷ್ಠಿತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರೋಪ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಜುಮನ್ ಶಿಕ್ಷಣ ಸಂಸ್ಥೆ ಕಳೆದ ನೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಮೂಲಕ ಎಲ್ಲರ ಬದುಕಿನಲ್ಲಿ ನೆಮ್ಮದಿ ತಂದಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ, ಅಂಜುಮನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರ ತ್ಯಾಗದಿಂದಾಗಿ ಇಂದು ಅಂಜುಮನ್ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಜನರ ಬಳಿ ಒಂದೊಂದು ರೂಪಾಯಿ ದೇಣಿಗೆ ಸಂಗ್ರಹಿಸಿ ಇದನ್ನು ಕಟ್ಟಿದರು. ಆಗ ಕೆಲವರು ತಮ್ಮ ಸ್ವಂತ ಸೊತ್ತು, ಆಸ್ತಿಗಳನ್ನು ಅಂಜುಮನ್ ಹೆಸರಿಗೆ ಬರೆದುಕೊಟ್ಟರು. ಅವರ ಶ್ರಮದಿಂದಾಗಿಯೇ ಇಂದು ನಾವು ಇಲ್ಲಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮಾತನಾಡಿದರು. ಅಂಜುಮನ್ ಸಂಸ್ಥೆಯ ಹಳೇ ವಿದ್ಯಾರ್ಥಿಗಳಾದ ಡಾ.ಝುಬೇರ್ ಕೋಲಾ, ಡಾ. ಝರ್ರಾರ್ ಇಕ್ಕೇರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯೀಲ್, ಅಂಜುಮನ್ ಅಲುಮ್ನಿ ಅಸೋಸಿಯೇಶನ್ ಸಂಚಾಲಕ ಅಶ್ಫಾಕ್ ಸಾದಾ, ಇಂಡಿಯನ್ ನವಾಯತ್ ಫೋರಂನ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕೋ, ಅಂಜುಮನ್ ಉಪಾಧ್ಯಕ್ಷ ಸಮೀರ್ ಸಖ್ಖಾಫ್, ಮುಸ್ಬಾ, ಕೆನರಾ ಮುಸ್ಲಿಮ್ ಖಲೀಜ್ ಕೌನ್ಸಿಲ್ ಅಧ್ಯಕ್ಷ ಮುಹಮ್ಮದ್ ಯೂನುಸ್ ಕಾಝಿಯಾ, ಮುಹಮ್ಮದ್ ಸಾದಿಕ್ ಪಿಲ್ಲೂರ್, ಇಸ್ಹಾಖ್ ಶಾಬಂದ್ರಿ ಮತ್ತಿತರರು ಉಪಸ್ಥಿತರಿದ್ದರು.
ಅಂಜುಮನ್ ಕಾರ್ಯಾಕಾರಿ ಸಮಿತಿ ಸದಸ್ಯ ಮುಬಶ್ಶಿರ್ ಹುಸೇನ್ ಹಲ್ಲಾರೆ ಸ್ವಾಗತಿಸಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸಾಬ್ ಆಬಿದಾ ಹಾಗೂ ಮುಷ್ತಾಕ್ ಭಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಫ್ತಾಬ್ ಖಮರಿ ವಂದಿಸಿದರು.







