ಕುಂದಾಪುರ | ಕಾರು ಢಿಕ್ಕಿಯಾಗಿ ದಂಪತಿ ಮೃತ್ಯು

ಕುಂದಾಪುರ, ಜ.2: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿಯಾಗಿ ವೃದ್ಧ ದಂಪತಿ ಸಾವನ್ನಪ್ಪಿದ ಘಟನೆ ಕುಂದಾಪುರದ ವಿನಾಯಕ ಚಿತ್ರಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ (68) ಹಾಗೂ ಅವರ ಪತ್ನಿ ಸರೋಜಾ ಶೆಡ್ತಿ (60) ಸಾವನ್ನಪ್ಪಿದವರು ಎಂದು ತಿಳಿದುಬಂದಿದೆ.
ಕುಂದಾಪುರದ ಇವರ ಸಂಬಂಧಿಕರು ಅನಾರೋಗ್ಯದಿಂದಿದ್ದು, ಅವರನ್ನು ನೋಡಲು ಬಂದು ವಾಪಸು ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಅಲ್ಲಿದ್ದ ಸಂಬಂಧಿಕರು ರಿಕ್ಷಾದಲ್ಲಿ ಹೋಗಿ ಅಂದಾಗ ಇಲ್ಲ, ಬಸ್ಸಿನಲ್ಲೇ ತೆರಳುವುದಾಗಿ ಹೇಳಿದ್ದು, ಬಸ್ಸಿಗಾಗಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿಯಾಗಿದೆ ಎನ್ನಲಾಗಿದೆ. ಮಹಾಬಲ ಶೆಟ್ಟಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಸರೋಜಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಮಂಜುನಾಥ ವಿರುದ್ಧ ಪ್ರಕರಣ ದಾಖಲಾಗಿದೆ.