ಪಣಂಬೂರು | ಮಕ್ಕಳಿಗೆ ದೌರ್ಜನ್ಯ ಆರೋಪ: ಪೊಲೀಸ್ ಕಾನ್‌ಸ್ಟೇಬಲ್ ಅಮಾನತು

ಪಣಂಬೂರು,ಜ.3: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರು ಬಾವಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದರೆನ್ನಲಾದ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಶಶಿಕುಮಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಾನ್ ಸ್ಟೇಬಲ್ ಸುನೀಲ್‌ನನ್ನು ಇಲಾಖಾ ತನಿಖೆಗೊಳಪಡಿಸಿ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ಪೊಷಕರು ಮತ್ತು ಬಾಲಕರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರಬಾವಿಯಲ್ಲಿ ಕ್ರಿಕೆಟ್ ಆಡಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪೊಲೀಸರು ಬಾಲಕರಿಗೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಘಟನೆಯಿಂದ 9ನೇ ತರಗತಿಯ ಬಾಲಕನೊಬ್ಬನಿಗೆ ಗಂಭೀರ ಗಾಯಗೊಂಡಿತ್ತು ಎನ್ನಲಾಗಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರ ಜೊತೆ ವಾಗ್ಬಾದ ನಡೆಸಿದ್ದರು. ಈ ಕುರಿತ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.