40 ಪರ್ಸೆಂಟ್ ಕಮಿಷನ್‍ಗೆ ಜೀವಗಳು ಬಲಿಯಾಗುತ್ತಿವೆ: ರಣದೀಪ್ ಸಿಂಗ್ ಸುರ್ಜೆವಾಲಾ
ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ

ಬೆಂಗಳೂರು, ಜ.3: ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ. ಭ್ರಷ್ಟ ಸರಕಾರದಿಂದ ಆಗುತ್ತಿರುವ ಸಾವುಗಳು. 40 ಪರ್ಸೆಂಟ್ ಕಮಿಷನ್ ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಪ್ರದೀಪ್ ನಿವಾಸಕ್ಕೆ ಮಂಗಳವಾರ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಕೂಡ ಬಿಜೆಪಿ ನಾಯಕನಾಗಿದ್ದ. ಅವನಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು ಎಂದರು.
ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕುತ್ತಿದ್ದಾರೆ? ಪ್ರದೀಪ್ ಸಾವು ಆತ್ಮ ಹತ್ಯೆ ಅಲ್ಲ, ಅದೊಂದು ಕೊಲೆ. ದುರಂತ್ಯ ಅಂತ್ಯವಾಗಿರುವ ಪ್ರದೀಪ್ ಕುಟುಂಬದೊಂದಿಗೆ ದುಃಖ ಹಂಚಿಕೊಳ್ಳಲು ನಾವು ಬಂದಿದ್ದೇವೆ. ಪ್ರದೀಪ್ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಪ್ರದೀಪ್ ಮಗಳ, ಹೆಂಡತಿಯ ಕಣ್ಣೀರು ಒರೆಸುವುದಕ್ಕೆ ಸರಕಾರದ ಕೈಲಿ ಸಾಧ್ಯ ಇದೆಯಾ?. ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗುತ್ತಿದೆ. ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರಕಾರ ಶಿಕ್ಷೆ ಕೊಡಬೇಕು. ಅವರು ಶಾಸಕರಾಗಿರಲಿ, ಬಿಜೆಪಿ ಹಿರಿಯ ನಾಯಕರಾಗಿರಲಿ ಅಥವಾ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಅವರನ್ನು ಬಂಧಿಸಬೇಕು ಕಂಬಿ ಹಿಂದೆ ಕಳಿಸಬೇಕು ಎಂದು ಸುರ್ಜೆವಾಲ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







