ತಾ.ಪಂ, ಜಿ.ಪಂ ಕ್ಷೇತ್ರಗಳ ಗಡಿ ಗುರುತಿಸಿದ ಆಯೋಗ; ಜ.16ರೊಳಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಆಹ್ವಾನ

ಬೆಂಗಳೂರು, ಜ.3: ಜನಗಣತಿ ಅಂಕಿ ಅಂಶದ ಆಧಾರದ ಮೇಲೆ ರಾಜ್ಯದಲ್ಲಿನ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತಿಗಳ ಗಡಿಯನ್ನು ಗುರುತಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಅಗತ್ಯ ಸಂಖ್ಯೆಯನ್ನು ನಿಗದಿ ಪಡಿಸಲು ಈ ಹಿಂದೆ ಸರಕಾರ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ಸದರಿ ಆಯೋಗವು ವರದಿ ಮಂಡನೆ ಮಾಡಿದ್ದು, ಸಾರ್ವಜನಿಕರಿಂದ ಆಕ್ಷೇಪಣಾ ಅರ್ಜಿಗೆ ಆಹ್ವಾನಿಸಿದೆ.
ಸದ್ಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗೆ ಸಂಬಂಧಿಸಿದ ಕ್ಷೇತ್ರ ಮರುವಿಂಗಡಣೆ ಮಾಹಿತಿ ಬಹಿರಂಗ ಪಡಿಸಲಾಗಿದ್ದು, ಅಲ್ಲಿ ಬರುವ ಪ್ರತೀ ಕ್ಷೇತ್ರದ ವ್ಯಾಪ್ತಿ, ಅಲ್ಲಿರುವ ಗ್ರಾಮಗಳ ವಿವರಣೆ ಇದೆ. ಇದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜನರಿಗೆ ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ, ಜ.16ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಗಳ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
https://rdpr.karnataka.gov.in/rdc/public/ ಈ ವೆಬ್‍ಸೈಟ್ ಮೂಲಕ ತಮ್ಮ ಆಕ್ಷೇಪಣೆಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಅಲ್ಲದೆ ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ. 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001’ ಇಲ್ಲಿಗೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಜ.16ರ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.







