ಮೊದಲ ಟ್ವೆಂಟಿ-20: ಶ್ರೀಲಂಕಾ ಗೆಲುವಿಗೆ 163 ರನ್ ಸವಾಲು ನೀಡಿದ ಭಾರತ
ಮುಂಬೈ, ಜ.3: ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ (ಔಟಾಗದೆ 41, 23 ಎಸೆತ) ಹಾಗೂ ಅಕ್ಷರ್ ಪಟೇಲ್ (ಔಟಾಗದೆ 31, 20 ಎಸೆತ) ಉಪಯುಕ್ತ ಜೊತೆಯಾಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ತಂಡಕ್ಕೆ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ 163 ರನ್ ಗುರಿ ನೀಡಿದೆ.
ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮಂಗಳವಾರ ಟಾಸ್ ಜಯಿಸಿದ ಶ್ರೀಲಂಕಾ ನಾಯಕ ದಸುನ್ ಶನಕ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಭಾರತ 94 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ತಂಡವನ್ನು ಆಧರಿಸಿದ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ 6ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದರು. ಭಾರತದ ಅಗ್ರ ಸರದಿಯಲ್ಲಿ ಆರಂಭಿಕ ಬ್ಯಾಟರ್ ಇಶಾನ್ ಕಿಶನ್(37 ರನ್)ಹೊರತುಪಡಿಸಿ ಉಳಿದವರು ವಿಫಲರಾದರು.
ಚೊಚ್ಚಲ ಪಂದ್ಯವನ್ನಾಡಿದ ಶುಭಮನ್ ಗಿಲ್ , ಸೂರ್ಯಕುಮಾರ್ ಯಾದವ್ ತಲಾ 7 ರನ್, ಸಂಜು ಸ್ಯಾಮ್ಸನ್ 5 ರನ್ ಗಳಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಗಳಿಸಲಷ್ಟೇ ಶಕ್ತರಾದರು.
ಲಂಕೆಯ ಪರ ಧನಂಜಯ ಡಿಸಿಲ್ವಾ(1-6), ಕರುಣರತ್ನೆ(1-22), ಮಹೀಶ್ ತೀಕ್ಷಣ(1-29), ಮದುಶಂಕ(1-35) ತಲಾ ಒಂದು ವಿಕೆಟ್ ಪಡೆದರು.