ಸಕಲ ಸರಕಾರಿ ಗೌರವದೊಂದಿಗೆ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ
ಹರಿದು ಬಂದ ಜನಸಾಗರ
ವಿಜಯಪುರ, ಜ.3: ಜ್ಞಾನಯೋಗಿ, ಶತಮಾನದ ಸಂತ ಎನಿಸಿಕೊಂಡ ಸರಳತೆಯ ಸಾಕಾರಮೂರ್ತಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದೊಂದಿಗೆ ಮಂಗಳವಾರ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿಸಲಾಯಿತು.
ಜ.2ರಂದು ಸಂಜೆ 6.05ಕ್ಕೆ ನಿಧನರಾದ ಸಿದ್ದೇಶ್ವರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ಜ್ಞಾನಯೋಗಾಶ್ರಮದ ಮುಂಭಾಗದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನಂತರ ಶ್ರೀಗಳ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ನಗರದ ಬಿಎಲ್ಡಿಇ ಆಸ್ಪತ್ರೆ, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ, ಶಿವಾಜಿ ವೃತ್ತದ ಮಾರ್ಗವಾಗಿ ಸೈನಿಕ ಶಾಲೆಗೆ ತೆಗೆದುಕೊಂಡು ಹೋಗಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಭಕ್ತರು ಶ್ರೀಗಳ ಪ್ರಾರ್ಥಿವ ಶರೀರವನ್ನು ದರ್ಶನ ಮಾಡಿ, ಕೈಮುಗಿದು ಕಂಬನಿ ಮಿಡಿದರು. ನಂತರ ಸರಕಾರದಿಂದ ಗೌರವ ವಂದನೆ ಸಲ್ಲಿಸಲಾಯಿತು.
ಈ ವೇಳೆ ಸರಕಾರದ ಪರವಾಗಿ ಮೊದಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಶಾಸಕರಾದ ಎಂ.ಬಿ.ಪಾಟೀಲ್, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಸರಕಾರದ ಹಿರಿಯ ಸಚಿವರು, ಶಾಸಕರು, ವಿವಿಧ ಮಠಗಳ ಸ್ವಾಮೀಜಿಗಳು ಸಿದ್ದೇಶ್ವರ ಶ್ರೀಗಳ ಪ್ರಾರ್ಥಿವ ಶರೀರದ ಬಳಿ ಹೂಗುಚ್ಛ ಇರಿಸಿ ಪುಷ್ಪ ನಮನ ಸಲ್ಲಿಸಿದರು.
ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಾನಂದ ಸ್ವಾಮೀಜಿ ಹಾಗೂ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಳಿಕ ಮತ್ತೆ ಪಾರ್ಥಿವ ಶರೀರವನ್ನು ಜ್ಞಾನಯೋಗಾಶ್ರಮಕ್ಕೆ ತೆರೆದ ವಾಹನದಲ್ಲಿ ಕರೆತಂದು, ಆಶ್ರಮದ ಆವರಣದಲ್ಲಿರುವ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಗದ್ದುಗೆ ಬಳಿ ಪ್ರಾರ್ಥಿವ ಶರೀರವನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಶ್ರೀಗಳ ಆಶಯದಂತೆ ಪಾರ್ಥಿವ ಶರೀರಕ್ಕೆ ವಿವಿಧ ಮಠಾಧೀಶರು ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಗ್ನಿ ಸ್ಪರ್ಶಕ್ಕೆ ಬಾಗಲಕೋಟೆಯಲ್ಲಿನ ಆಶ್ರಮದಲ್ಲಿ ಶಿಷ್ಯರು ಬೆಳೆಸಿದ್ದ ಗಂಧದ ಕಟ್ಟಿಗೆಯನ್ನು ಬಳಸಲಾಯಿತು.