ಸರಕಾರ ಮತ ಗಳಿಕೆಯ ಎಟಿಎಂ ರೀತಿ ಕೆಲಸ ಮಾಡ್ತಿದೆ: ಸೊರಕೆ ಟೀಕೆ

ಉಡುಪಿ: ರಾಜ್ಯ ಸರಕಾರ ಚುನಾವಣೆಗೆ ಇನ್ನು ಎರಡೇ ತಿಂಗಳು ಇರುವಾಗ ಮತ ಗಳಿಕೆಯ ‘ಎಟಿಎಂ’ ರೀತಿ ಕೆಲಸ ಮಾಡುತ್ತಿದೆ. ರಾಜ್ಯದ ಬಿಜೆಪಿ ಸರಕಾರ ಮತಗಳಿಸುವ ಏಕೈಕ ಉದ್ದೇಶದಿಂದ ವಿವಿಧ ಕಾರ್ಯಕ್ರಮ ಗಳನ್ನು ಘೋಷಿಸುತ್ತಿದೆ. ವಿವಿಧ ಜಾತಿಗಳಿಗೆ ಮೀಸಲಾತಿಯನ್ನು ಹಂಚುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಬಿಲ್ಲವ ಸಮುದಾಯವನ್ನು ನಿರ್ಲಕ್ಷಿಸಿದ್ದ ಸರಕಾರ ಈಗ ನಾರಾಯಣಗುರುಗಳ ಹೆಸರಿನಲ್ಲಿ ಬಿಲ್ಲವ ನಿಗಮ ಸ್ಥಾಪನೆ ಮಾಡುವ ಮಾತಾಡುತ್ತಿದೆ. ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ನೀಡುವ ಮಾತನಾಡುತ್ತಿದೆ ಎಂದ ಅವರು, ಇದು ಮತ ಗಳಿಕೆಯ ಹುನ್ನಾರವಲ್ಲದೆ ಇನ್ನೇನೂ ಅಲ್ಲ ಎಂದರು.
ಈ ಹಿಂದೆ ಬಿಲ್ಲವ ಕೋಶ ಸ್ಥಾಪಿಸಿದ್ದ ಸರಕಾರ, ಬಿಲ್ಲವ ಕೋಶದಿಂದ ಬಿಲ್ಲವ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಹೇಳುತ್ತಿತ್ತು. ಆದರೆ ಈಗ ಚುನಾವಣೆ ಹತ್ತಿರ ಬಂದಾಗ ಬಿಲ್ಲವ ನಿಗಮ ಸ್ಥಾಪಿಸುತ್ತೇವೆ ಎಂದು ಹೇಳುತ್ತಿದೆ. ಒಟ್ಟಾರೆ ಬಿಜೆಪಿಗೆ ಮತಗಳಿಕೆ ಮುಖ್ಯವೇ ಹೊರತು ಬಿಲ್ಲವ ಸಮುದಾಯದ ಏಳಿಗೆ ಅಲ್ಲ.ಈ ಹಿಂದೆ ನಾರಾಯಣ ಗುರುಗಳ ಸ್ಥಬ್ಧಚಿತ್ರ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿದ್ದು ಜನರಿಗೆ ಗೊತ್ತೇ ಇದೆ. ಈಗ ಬಿಲ್ಲವ ಸ್ವಾಮೀಜಿಯೊಬ್ಬರು ಬಿಲ್ಲವ ನಿಗಮ ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆಗೆ ಹೊರಟಿದ್ದಾರೆ. ಆರನೇ ತಾರೀಕಿಗೆ ಪಾದಯಾತ್ರೆ ನಡೆಯಲಿದೆ. ಹೀಗಾಗಿ ಈಗ ನಿಗಮ ಸ್ಥಾಪನೆ ಮಾಡುವ ಮಾತಾಡುತ್ತಿದೆ. ನಿಗಮ ಸ್ಥಾಪನೆ ಮಾಡುವುದರಿಂದ ಬಿಲ್ಲವ ಸಮುದಾಯಕ್ಜೆ ಏನಾದರೂ ಉಪಯೋಗ ಆಗಬೇಕು. ಅದಿಲ್ಲದಿದ್ದರೆ ಏನು ಪ್ರಯೋಜನ ಎಂದು ಲೇವಡಿ ಮಾಡಿದರು.
ಬಿಜೆಪಿ ಸರಕಾರ 2,65,000 ಕೋಟಿ ರೂ.ಗಳ ಬಜೆಟ್ ಮಂಡಿಸಿದೆ. ಇದರಲ್ಲಿ 2,10,000 ಕೋಟಿ ರೂ. ಸಂಬಳ ಹಾಗೂ ಇತರ ಖರ್ಚುಗಳಿಗೆ ಹೋಗುತ್ತದೆ. ಉಳಿಯುವುದು 40,000 ಕೋಟಿ ರೂ.ಮಾತ್ರ. ಸರಕಾರದ ಬಳಿ ಬಾಕಿ ಇರುವ ಬಿಲ್‌ಗಳ ಒಟ್ಟು ಮೊತ್ತವೇ 1,36,000 ಕೋಟಿ ರೂ.ಗಳಾಗಿವೆ. ಒಟ್ಟಾರೆ ಸರಕಾರ ದಿವಾಳಿಯಾದರೂ, ಮತಗಳಿಕೆಗಾಗಿ ಪ್ರತಿದಿನ ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಿದೆ ಎಂದು ದೂರಿದರು.
ಬಿಲ್ಲವರಂತೆ ಮೀನುಗಾರರನ್ನೂ ಈ ಸರಕಾರ ವಂಚಿಸುತ್ತಿದೆ. ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆಯ ನಾಟಕವಾಡುತಿದ್ದು, ಕಳೆದ ಆರು ತಿಂಗಳಿಂದ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿಲ್ಲ ಎಂದ ಅವರು ವಿಶ್ವಕರ್ಮ ಸಮಾಜಕ್ಕೂ ಇದೇ ರೀತಿ ಮಾಡಿದೆ. ಒಟ್ಟಾರೆಯಾಗಿ ಭಾವನಾತ್ಮಕ ವಿಷಯಗಳನ್ನು ಕ್ರೋಡೀಕರಿಸುವ ಕೆಲಸವನ್ನು ಅದು ಮಾಡುತ್ತಿದೆ ಎಂದು ಸೊರಕೆ ಹೇಳಿದರು.