ವೀರರಾಣಿ ಅಬ್ಬಕ್ಕಳಿಗೆ ಬಿಜೆಪಿಯಿಂದ ಅವಮಾನ: ಯು.ಟಿ.ಖಾದರ್

ಮಂಗಳೂರು, ಜ.4: ಅಬ್ಬಕ್ಕ ಉತ್ಸವಕ್ಕೆ ಅನುದಾನ ಕಡಿತ ಮಾಡುವ ಮೂಲಕ ವೀರರಾಣಿ ಅಬ್ಬಕ್ಕಳಿಗೆ ಬಿಜೆಪಿ ನೇತೃತ್ವದ ಸರಕಾರ ಅವಮಾನ ಮಾಡುತ್ತಿದೆ ಎಂದು ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಬ್ಬಕ್ಕ ಉತ್ಸವಕ್ಕೆ ಸರಕಾರ 50 ಲಕ್ಷ ರೂ. ಬಿಡುಗಡೆ ಮಾಡಿತ್ತು. ಆದರೆ ಈಗಿನ ಸರಕಾರ ಈ ಮೊತ್ತವನ್ನು ಕಡಿತಗೊಳಿಸಿ ಕೇವಲ 10 ಲಕ್ಷ ರೂ.ಗೆ ಸೀಮಿತಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
* ಹಾಲು ಉತ್ಪಾದನೆಯಲ್ಲಿ ಇಳಿಮುಖ: ರಾಜ್ಯದಲ್ಲಿ ಹಾಲು ಉತ್ಪಾದನೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಗೋಸಂತತಿ ಹೆಚ್ಚಿಸಲು ರಾಜ್ಯ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗೋವಿನ ಹೆಸರಿನಲ್ಲಿ ರಾಜಕೀಯ ಮಾತ್ರ ಮಾಡುತ್ತಿದೆ ಎಂದು ಖಾದರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಖಾಲಿಯಿರುವ ಪಶುವೈದ್ಯರ ನೇಮಕವಾಗಿಲ್ಲ. ಪಶು ವೈದ್ಯಕೀಯ ಚಿಕಿತ್ಸೆಗಾಗಿ ಆರಂಭಿಸಲಾದ ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿಯ ನೇಮಕವಾಗಿಲ್ಲ. ರಾಜ್ಯದ ಲ್ಲಿ 21 ಸಾವಿರ ಹಸುಗಳು ಸಾವಿಗೀಡಾಗಿವೆ. ಸರಕಾರದಿಂದ ಸೂಕ್ತ ಕ್ರಮ ಆಗುತ್ತಾ ಇಲ್ಲ ಎಂದು ಖಾದರ್ ಹೇಳಿದರು.
*108 ಆ್ಯಂಬುಲೆನ್ಸ್ ಸೇವೆ ಸಮರ್ಪಕವಾಗಿಲ್ಲ:
ರಾಜ್ಯದ ಜನತೆಗೆ ಯಾವುದೇ ಸ್ಥಳದಲ್ಲಿ ಜೀವರಕ್ಷಣೆ(20ನಿಮಿಷದ ಒಳಗೆ)ಗೆ ತುರ್ತು ಸೇವೆ ಒದಗಿಸಲು ಸಹಕಾರಿಯಾಗಲು ಸರ್ಕಾರದ ಮೂಲಕ ಒದಗಿಸಲಾದ (108 ಸಂಖ್ಯೆ ಗೆ) ಆ್ಯಂಬುಲೆನ್ಸ್ ಸೇವೆಯ ಬಗ್ಗೆ ರಾಜ್ಯ ಬಿಜೆಪಿ ಸರಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಈ ಸೇವೆ ಜನರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ಕೋವಿಡ್ ಮೂರನೇ ಅಲೇ ಪ್ರವೇಶವಾಗಿದ್ದರೂ ಸರಕಾರ ಎಚ್ಚೆತ್ತಿಲ್ಲ. ಆಕ್ಸಿಜನ್ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿ ಇಟ್ಟಿಲ್ಲ ಎಂದು ಆರೋಪಿಸಿದ ಖಾದರ್, ಡಬ್ಬಲ್ ಇಂಜಿನ್ ಸರಕಾಕ್ಕೆ ಕೋಮುವಾದ ಇಂಧನ. ಅದರ ವಿಷಗಾಳಿಯನ್ನು ಜನರ ಮೇಲೆ ಬಿಡುತ್ತಿದೆ. ಜನರಿಗೆ ಕಣ್ಣಲ್ಲಿ ನೀರು ತರಿಸಿದ ಡಬ್ಬಲ್ ಇಂಜಿನ್ ಸರಕಾರವನ್ನು ಜನರೇ ಗುಜರಿಗೆ ಸಾಗಿಸುತ್ತಾರೆ ಎಂದು ಹೇಳಿದರು.
* ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಗಮನಹರಿಸಿ ಎನ್ನುವ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ಅವರು ಅಭಿವೃದ್ಧಿ ಕೆಲಸ ಮಾಡುವ ನೈತಿಕತೆಯನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದರು.
ತಂದೆ-ತಾಯಿ-ಮಕ್ಕಳ ನಡುವೆ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವವರು ಪಕ್ಷದ ನಾಯಕರ ನಡುವೆ ಬಿರುಕು ಮೂಡಿಸಲು ನನ್ನ ಮತ್ತು ರಮಾನಾಥ ರೈಯವರ ಹೆಸರನ್ನು ಪ್ರಸ್ತಾಪಿಸಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಸಂಸದರ ಬಳಿ 'ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಜಯ ಗಳಿಸಿ ಸಚಿವರಾಗುತ್ತಾರೆ' ಎಂದು ಹೇಳಿದ್ದೇನೆ. ಅದನ್ನು ಅವರು ಎಲ್ಲೂ ಹೇಳುತ್ತಿಲ್ಲ ಎಂದು ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಉದಯ ಕುಮಾರ್, ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.







