ಮೀನುಗಾರಿ ಉತ್ತಮವಾದ ಉಪಬೆಳೆ: ಸಚಿವ ಎಸ್. ಅಂಗಾರ
ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟನೆ

ಪುತ್ತೂರು: ಮೀನುಗಾರಿಕೆಯು ಅಲ್ಪ ಜಾಗವಿದ್ದರೂ ಮಾಡಲು ಸಾಧ್ಯವಿದ್ದು, ಇದೊಂದು ಉತ್ತಮ ಆದಾಯದ ಉಪಬೆಳೆಯಾಗಿದೆ. ಕಡಿಮೆ ವೆಚ್ಚದ ಮೀನು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಬಂದರು ಮತ್ತು ಒಳನಾಡು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ತಿಳಿಸಿದರು.
ಅವರು ಬುಧವಾರ ಪುತ್ತೂರು ತಾಲೂಕು ಪಂಚಾಯತ್ ಕಟ್ಟಡದಲ್ಲಿ ಆರಂಬಿಸಲಾದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳನ್ನು ಒಳಗೊಂಡ ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಒಳನಾಡು ಮೀನುಗಾರಿಕೆ ಉತ್ತೇಜನಕ್ಕಾಗಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇಲಾಖೆ ಅಧಿಕಾರಿಗಳೇ ನೀರಿನ ಲಭ್ಯತೆ ಇರುವ ಕೃಷಿಕರ ಮನೆ ಬಾಗಿಲಿಗೆ ಭೇಟಿ ಮಾಡಲಿದ್ದಾರೆ. ಇಲಾಖೆಯ ಸೌಲಭ್ಯಗಳನ್ನು ರೈತನಿಗೆ ತಿಳಿಸುವ ಕೆಲಸ ಅಧಿಕಾರಿಗಳು ಮಾಡಲಿದ್ದಾರೆ. ಆ ಮೂಲಕ ಇಲಾಖೆ ಕಡೆಯಿಂದ ಗರಿಷ್ಠ ಪ್ರೋತ್ಸಾಹಕ್ಕೆ ಒತ್ತು ನೀಡಲಾಗುತ್ತದೆ ಎಂದರು.
ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಇದೀಗ ಅನೇಕ ಬದಲಾವಣೆಗಳಾಗಿವೆ. ಅಡಕೆ ಬೆಳೆಗೆ ಬೇಕಾಗುವಷ್ಟು ಭೂಮಿಯ ಅವಶ್ಯಕತೆ ಇದ್ದು, ಮೀನು ಕೃಷಿಗೆ ಅಷ್ಟು ಬೇಕಾಗಿಲ್ಲ. ಸ್ವಲ್ಪ ಜಾಗ ಇರುವ ಸಣ್ಣ ಕುಟುಂಬವೂ ಮೀನು ಸಾಕಾಣಿಕೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ನೀರಿನ ವ್ಯವಸ್ಥೆ ಇರುವ ಕೃಷಿಕರು ಮೀನು ಸಾಕಾಣಿಕೆಗೆ ಮುಂದಾಗಬೇಕು ಎಂದು ಹೇಳಿದರು.
ಮೀನು ಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮ ಸಹಾಯಕ, ಸಾಗರಮಿತ್ರ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಹಾಲಿ ಅಧಿಕಾರಿಗಳ ಕೊರತೆ ಇರುವುದರಿಂದ ಸಾಗರ ಮಿತ್ರ ಯೋಜನೆಯಲ್ಲಿ ಪ್ರತೀ ಗ್ರಾಮದಲ್ಲಿ ಗುತ್ತಿಗೆ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೀನು ಕೃಷಿಕರಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ನೀಡುವ ವ್ಯವಸ್ಥೆ ಇಲಾಖೆಯಿಂದ ಮಾಡಲಾಗುತ್ತಿದೆ. ಆಮೂಲಕ ಇಲಾಖೆಯಿಂದ ಅವರಿಗೆ ಸಹಕಾರ ನೀಡಲಾಗುತ್ತಿದೆ. ಜ. 13 ರಂದು ಸುಳ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಮೀನುಗಾರಿಕೆ ಇಲಾಖೆ ಮಂಗಳೂರು ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್, ಪುತ್ತೂರು ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮತ್ತಿತರರು ಈ ಸಂದಭದಲ್ಲಿ ಉಪಸ್ಥಿತರಿದ್ದರು.
ಸಚಿವ ಎಸ್. ಅಂಗಾರ ಅವರು ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಉದ್ಘಾಟಿಸಿದರು.