ಪ್ರಣವಾನಂದ ಸ್ವಾಮೀಜಿಯನ್ನು ಅನುಸರಿಸುತ್ತಿರುವರು ನಾರಾಯಣ ಗುರುಗಳ ನೈಜ ಅನುಯಾಯಿಗಳಲ್ಲ: ಭದ್ರಾನಂದ ಸ್ವಾಮೀಜಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಪ್ರಣವಾನಂದ ಸ್ವಾಮೀಜಿಯನ್ನು ಯಾರು ಅನುಸರಿಸುತ್ತಾರೋ ಅವರು ನಾರಾಯಣಗುರುಗಳ ನೈಜ ಅನುಯಾಯಿಗಳಲ್ಲ ಎಂದು ಸನಾತನ ಧರ್ಮ ಪ್ರಚಾರಕ ಕೇರಳ ಮೂಲದ ಭದ್ರಾನಂದ ಸ್ವಾಮೀಜಿ ಹೇಳಿದ್ದಾರೆ.
ಪತ್ರಿಕಾಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.6ರಿಂದ ಮಂಗಳೂರಿನಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿರುವ ಬ್ರಹ್ಮಶ್ರೀ ಶಕ್ತಿ ಪೀಠದ ಶ್ರೀಪ್ರಣವಾನಂದ ಸ್ವಾಮೀಜಿಗೆ ಮಂಗಳೂರಿಗೆ ಕಾಲಿಡಲು ಅವಕಾಶ ನೀಡಬೇಡಿ ಎಂದು ವಿನಂತಿಸಿದರು.
ಬ್ರಹ್ಮರ್ಷಿ ನಾರಾಯಣ ಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ, ಇದಕ್ಕಾಗಿ 500 ಕೋಟಿ ರೂ. ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜ.6ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ 658 ಕಿ.ಮೀ. ದೂರದ ಪಾದಯಾತ್ರೆಯನ್ನು ಕೈಗೊಂಡಿರುವ ಶ್ರೀಪ್ರಣವಾನಂದ ಸ್ವಾಮೀಜಿ ವಿರುದ್ಧ ಭದ್ರಾನಂದ ಸ್ವಾಮೀಜಿ ಹರಿಹಾಯ್ದರು.
ತಾನು ಬ್ರಹ್ಮಶ್ರೀ ನಾರಾಯಣ ಗುರುಗಳ ವಂಶಕ್ಕೆ ಸೇರಿದವರೆಂದು ಪ್ರತಿಪಾದಿಸಿದ ಭದ್ರಾನಂದ, ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅನುಸರಿಸುತ್ತಾರೊ ಅವರು ಪ್ರಣವಾನಂದರ ಪಾದಯಾತ್ರೆಯನ್ನು ಬೆಂಬಲಿಸಬೇಡಿ. ಅವರ ಪಾದಯಾತ್ರೆಯ ಹಿಂದೆ ರಾಜಕೀಯ ಉದ್ದೇಶ ಇದೆ ಎಂದರು.
ಭದ್ರಾನಂದ ಸ್ವಾಮೀಜಿ ಪರಿಚಯ ಲೇಖನದಲ್ಲಿ ಇಬ್ಬರು ಅಂಗರಕ್ಷಕರೊಂದಿಗೆ ಕುಳಿತುಕೊಂಡಿರುವ ಫೋಟೊದ ಬಗ್ಗೆ ಸುದ್ದಿಗಾರರೊಬ್ಬರು ಗಮನ ಸೆಳೆದಾಗ ಧರ್ಮ ರಕ್ಷಣೆ ಕಾರ್ಯದಲ್ಲಿ ನಿರತರಾದವರಿಗೆ ಅವೆಲ್ಲ ಬೇಕಾಗುತ್ತದೆ. ಮೂರು ಬಾರಿ ನನ್ನ ಕೊಲೆಗೆ ಯತ್ನ ನಡೆದಿತ್ತು. ಹೀಗಾಗಿ ಅಂಗರಕ್ಷಕರನ್ನು ಇಟ್ಟುಕೊಂಡಿರುವೆನು ಎಂದರು.







