ಮಂಗಳೂರು: ಜ.8ರಂದು ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಸೈಕ್ಲಾಥಾನ್

ಮಂಗಳೂರು: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳಲಿರುವ ಮಂಗಳೂರಿನಲ್ಲಿ ಶಾಲಾ ಮಕ್ಕಳು ಮತ್ತು ಅವರ ಪೋಷಕರಲ್ಲಿ ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಜ.8ರಂದು ಸೈಕ್ಲಾಥಾನ್ (ಸೈಕಲ್ ಜಾಥಾ) ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ವಿಆರ್ ಸೈಕ್ಲಿಂಗ್‌ನ ಕಾರ್ಯದರ್ಶಿ ಹರ್ನೀಶ್‌ರಾಜ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.8ರಂದು ಜ.7 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾ ಆರಂಭಗೊಳ್ಳಲಿದ್ದು, ಮಂಗಳೂರು ಎಸಿಪಿ ಗೀತಾ ಕುಲಕರ್ಣಿ ಚಾಲನೆ ನೀಡಲಿರುವರು ಎಂದರು.
ಐಡಿಯಲ್ ಐಸ್ ಕ್ರೀಮ್‌ನ ಮುಕುಂದ್ ಕಾಮತ್, ಕಶರ್ಪ್ ಫಿಟ್‌ನೆಸ್‌ನ ಆನಂದ್ ಪ್ರಭು, ತಾಜ್ ಸೈಕಲ್ ಕಂಪನಿಯ ಎಸ್.ಎಂ ಮುತ್ತಲೀಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಲೇಡಿಹಿಲ್, ಸಿಟಿ ಕಾರ್ಪೊರೇಷನ್, ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ಸರ್ಕಲ್, ಹಂಪನಕಟ್ಟೆ, ಕ್ಲಾಕ್ ಟವರ್, ಎಂಜಿ ರೋಡ್ ಲೇಡಿಹಿಲ್ ಮತ್ತು ಕೆನರಾ ಸ್ಕೂಲ್ , ಉರ್ವ ಗ್ರೌಂಡ್ ತನಕ ಸಾಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 1,000 ಕ್ಕೂ ಮಿಗಿಲಾಗಿ ಮಕ್ಕಳು, ಪೋಷಕರು, ಯುವಕರು ಹಾಗೂ ಕ್ರೀಡಾ ಉತ್ಸಾಹಿಗಳು ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ. ವಿಆರ್ ಸೈಕ್ಲಿಂಗ್ ಮಂಗಳೂರಿನ ಒಂದು ವೃತ್ತಿಪರ ಕ್ರೀಡಾ ಕ್ಲಬ್ ಆಗಿದ್ದು, ಸುತ್ತಮುತ್ತಲಿನ ಪರಿಸರದ ಜನರಲ್ಲಿ ಆರೋಗ್ಯಕರ ಜೀವನದ ಶೈಲಿಯನ್ನು ಅಳವಡಿಸಿಕೊಳ್ಳುವಲ್ಲಿ ಪ್ರೋತ್ಸಾಹಿಸುತ್ತದೆ. ವರ್ಕೌಟ್, ಎಂಡ್ಯುರೆನ್ಸ್ ಮತ್ತು ರೇಸಿಂಗ್‌ನಂತಹ ಪ್ರಮುಖ ಮೌಲ್ಯಗಳನ್ನು ಹೊಂದಿರುವ ಈ ಕ್ಲಬ್, ‘ಎಲ್ಲರಿಗೂ ಆರೋಗ್ಯ ಮತ್ತು ಎಲ್ಲರೂ ಫಿಟ್’ ಎಂಬ ಗುರಿಯನ್ನು ಹೊಂದಿದೆ.
ವಿಆರ್ ತಂಡವು ಮಂಗಳೂರು ಸ್ಮಾರ್ಟ್ ಸಿಟಿ ಪರ ಸೈಕಲ್ ಫೋರ್ ಚಾಲೆಂಜ್, ಸೈಕ್ಲಿಂಗ್ ಒನಿ ಯೋಜನೆ ಸೇರಿದಂತೆ ಫಿಟ್ ಇಂಡಿಯಾ ಅಭಿಯಾನಗಳು, ಮಾದಕ ದ್ರವ್ಯ ವಿರೋಧಿ ಅಭಿಯಾನ, ಸಂಚಾರ ಸುರಕ್ಷತಾ ಜಾಗೃತಿ, ಬೀಚ್ ಕ್ಲೀನ್ ಅಪ್, ವನ್ಯ ಜೀವಿಗಳನ್ನು ಉಳಿಸಿ, ಪ್ಲಾಸ್ಟಿಕ್, ಬಳಕೆಯನ್ನು ನಿಲ್ಲಿಸುವ ಅಭಿಯಾನ, ಅರಣ್ಯಗಳನ್ನು ಉಳಿಸಿ ಇತ್ಯಾದಿ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹರ್ನಿಶ್ ರಾಜ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಆರ್ ಸೈಕ್ಲಿಂಗ್‌ನ ಅಧ್ಯಕ್ಷ ಸರ್ವೇಶ್ ಸಾಮಗ, ಉಪಾಧ್ಯಕ್ಷ ಶ್ಯಾಮ ಪ್ರಸಾದ್ ನಾಯಕ್, ಕೋಶಾಧಿಕಾರಿ ಅಶ್ವಥ್ ರಸ್ಕಿಂಞಿ, ತಾಜ್ ಸೈಕಲ್‌ನ ಮುಬೀನ್ ಉಪಸ್ಥಿತರಿದ್ದರು.
