OBC ಮೀಸಲಾತಿ ಇಲ್ಲದೆ ಸ್ಥಳೀಯಾಡಳಿತ ಚುನಾವಣೆ ನಡೆಸಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಿಲ್ಲದೆ ನಗರ ಸ್ಥಳೀಯಾಡಳಿತ ಚುನಾವಣೆಗಳನ್ನು ನಡೆಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ವಿಧಿಸಿದೆ.
ನಗರ ಸ್ಥಳೀಯಾಡಳಿತಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಅಗತ್ಯವಿರುವ ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗ ಈ ವರ್ಷದ ಮಾರ್ಚ್ 31 ರೊಳಗಾಗಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸ್ಥಳೀಯಾಡಳಿತ ಚುನಾವಣೆಗಳಿಗೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಸ್ತಾಪಿಸಿ ರಾಜ್ಯ ಸರ್ಕಾರ ಡಿಸೆಂಬರ್ 5 ರಂದು ಹೊರಡಿಸಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠ ಡಿಸೆಂಬರ್ 27 ರಂದು ವಜಾಗೊಳಿಸಿತ್ತು ಹಾಗೂ ಒಬಿಸಿ ಮೀಸಲಾತಿ ಇಲ್ಲದೆಯೇ ಚುನಾವಣೆ ನಡೆಸುವ ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಹೈಕೋರ್ಟ್ ತೀರ್ಪಿನ ನಂತರ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಒಬಿಸಿಗಳಿಗೆ ಮೀಸಲಾತಿಯಿಲ್ಲದೆ ಸ್ಥಳೀಯಾಡಳಿತ ಚುನಾವಣೆಯನ್ನು ನಡೆಸಲಾಗುವುದಿಲ್ಲ ಎಂದಿದ್ದರು. ನಂತರ ಅವರ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.







