ಮಂಗಳೂರು: ಜ.6ರಂದು ಕುದ್ರೋಳಿಯಿಂದ ಬಿಲ್ಲವರ ಪಾದಯಾತ್ರೆಗೆ ಚಾಲನೆ
ಮಂಗಳೂರು: ಬಿಲ್ಲವ, ಈಡಿಗ ನಾಮಧಾರಿ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯಲಿರುವ 41 ದಿನಗಳ ಪಾದಯಾತ್ರೆಗೆ ಜ.6ರಂದು ಬೆಳಗ್ಗೆ 10:30ಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಚಾಲನೆ ಸಿಗಲಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುವ 658 ಕಿಮೀ ಹಾದಿಯ ಪಾದಯಾತ್ರೆಗೆ ಈಡಿಗ ಬಿಲ್ಲವ ಸಮುದಾಯದ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ತೆಲಂಗಾಣದ ಅಬಕಾರಿ ಹಾಗು ಪ್ರವಾಸೋದ್ಯಮ ಖಾತೆ ಸಚಿವ ಶ್ರೀನಿವಾಸ ಗೌಡ್ ಚಾಲನೆ ನೀಡುವರು ಎಂದು ತಿಳಿದುಬಂದಿದೆ.
ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಕೃಷಿ ಸಚಿವ ಜೋಗಿ ರಮೇಶ್, ಆಂಧ್ರಪ್ರದೇಶ ರಾಜಮುಂಡ್ರಿ ಸಂಸದ ಮರ್ಗಣಿ ಭರತ್, ಬಹುಭಾಷಾ ಚಿತ್ರನಟ ಸುಮನ್ ತಲ್ವಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್.ಶ್ರೀನಾಥ್, ಬಿಜೆಪಿ ಮುಖಂಡ ಗುಲ್ಬರ್ಗ ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಳಚೂರಿ ಸಮಾಜ ಒಕ್ಕೂಟದ ಅಧ್ಯಕ್ಷೆ ಅರ್ಚನಾ ಜೈಸ್ವಾಲ್, ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಮಪ್ಪಜ್ಜ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಮಾಜಿ ಶಾಸಕರಾದ ವಸಂತ ಬಂಗೇರ , ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ ಬೈಂದೂರು, ಶಾಸಕರಾದ ಕೆ. ಹರೀಶ್ ಕುಮಾರ್, ಉಮಾನಾಥ ಕೋಟ್ಯಾನ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಡಿ.ಸುವರ್ಣ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್. ಸಾಯಿರಾಮ್, ಯುವವಾಹಿನಿ ಅಧ್ಯಕ್ಷ ರಾಜೇಶ್ ಬಂಟ್ವಾಳ್, ಮೂರ್ತೆದಾರರ ಸೇವಾ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಲಾಗಿದೆ.
ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಖ್ಯಾತನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಮೋಹನದಾಸ ಪರಮಹಂಸ ಸ್ವಾಮೀಜಿ, ಮಹಾಬಲೇಶ್ವರ ಸ್ವಾಮೀಜಿ, ಕೃಷ್ಣ ಗುರೂಜಿ, ಸಂಗಮನಾಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನಿಂದ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲಪುವ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಭಾಗವಹಿಸಲಿದ್ದಾರೆ. ಮೊದಲ ದಿನ ಕುಳಾಯಿಯಲ್ಲಿ ವಾಸ್ತವ್ಯ ಹೂಡಲಿದ್ದು, ಮರುದಿನ ಬೆಳಗ್ಗೆ ಕುಳಾಯಿಯಿಂದ ಆರಂಭಗೊಳ್ಳುವ ಪಾದಯಾತ್ರೆ ಸಂಜೆ ಹೆಜಮಾಡಿ ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.