ಮಂಗಳೂರು: ಜ.6ರಂದು ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ
ಮಂಗಳೂರು: ಯುನಿವೆಫ್ ಕರ್ನಾಟಕ ಆಶ್ರಯದಲ್ಲಿ ನಡೆಯುತ್ತಿರುವ ಪ್ರವಾದಿ ಮುಹಮ್ಮದ್ (ಸ)ರವರ ಸಂದೇಶ ಪ್ರಚಾರ ಅಭಿಯಾನ(ಅರಿಯಿರಿ ಮನುಕುಲದ ಪ್ರವಾದಿಯನ್ನು) ಸಮಾರೋಪ ಸಮಾರಂಭವು ಜ.6ರಂದು ಸಂಜೆ 6.45ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಹಿತಿ ನೀಡಿದ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು, ಮಾನವ ಸಮಾಜ, ಸಂಸ್ಕೃತಿ, ಮತ್ತು ಪ್ರವಾದಿ ಬೋಧನೆಗಳು ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ ಪೀಟರ್ ಪೌಲ್ ಸಲ್ದಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಯುನಿವೆಫ್ 17 ವರ್ಷಗಳಿಂದ ಪ್ರವಾದಿಯ ಮಾನವೀಯ ಸಂದೇಶಗಳನ್ನು ಜನರ ಮುಂದಿರಿಸಿ, ಅವರ ತಪ್ಪು ಕಲ್ಪನೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುನಿವೆಫ್ ಶ್ರಮಿಸಿದೆ ಎಂದು ಹೇಳಿದರು.
2022ರ ಅಕ್ಟೋಬರ್ 21ರಂದು ಆರಂಭಗೊಂಡ ಅಭಿಯಾನದಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸೀರತ್ ಸಮಾವೇಶಗಳನ್ನು ಹಮ್ಮಿಕೊಂಡು ಸಾರ್ವಜನಿಕ ಕಾರ್ಯಕ್ರಮಗಳು, ಕಾರ್ನರ್ ಮೀಟಿಂಗ್ ಗಳು, ಜೀಪ್ ಜಾಥಾ, ಕರಪತ್ರ ಮತ್ತು ಪುರವಣಿ ವಿತರಣೆಗಳ ಮೂಲಕ ಜನಜಾಗೃತಿಯನ್ನು ಮೂಡಿಸಿ, ಪ್ರವಾದಿ ವ್ಯಕ್ತಿತ್ವವನ್ನು ಅನಾವರಣಗೊಳಿಸಿ, ಟೀಕಾಕಾರರಿಗೆ ಪ್ರತ್ಯುತ್ತರ ನೀಡಲು ಈ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಹ ಸಂಚಾಲಕರಾದ ಉಬೈದುಲ್ಲಾ ಬಂಟ್ವಾಳ, ಆಸಿಫ್ ಕುದ್ರೋಳಿ, ಸದಸ್ಯರಾದ ಅಬ್ದುಲ್ ರಶೀದ್, ಹನೀಫ್ ಉಳ್ಳಾಲ ಉಪಸ್ಥಿತರಿದ್ದರು.