ಮಂಗಳೂರು: ಎ.ಜೆ.ಆಸ್ಪತ್ರೆಯಲ್ಲಿ ಅಪರೂಪದ ಅಂಗಾಂಗ ಕಸಿ ಸರ್ಜರಿ
ಮಂಗಳೂರು: ಅಪರೂಪದ ನಿದರ್ಶನದಲ್ಲಿ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಎರಡೂ ಕಿಡ್ನಿಗಳನ್ನು ಇಬ್ಬರು ರೋಗಿಗಳಿಗೆ ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಯ ಮೂಲಕ ಆಳವಡಿಸಲಾಗಿದೆ.
ಇಬ್ಬರು ರೋಗಿಗಳಿಗೆ ಒಂದೇ ಆಸ್ಪತ್ರೆಯಲ್ಲಿ ಎರಡು ಕಿಡ್ನಿಗಳನ್ನು ಜೋಡಿಸುವ ಅವಕಾಶ ಸಿಗುವುದು ಕಡಿಮೆ. 6-7 ಗಂಟೆಗಳಲ್ಲಿ ಮೂತ್ರಪಿಂಡದ ಮರು ಜೋಡನೆ ಸವಾಲಾಗಿರುತ್ತದೆ. ಆದರೆ ಎಜೆ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಕ್ರಿಯೆಯನ್ನು ಪೂರೈಸಿದ್ದು, ಹೀಗೆ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡ ಎರಡೂ ರೋಗಿಗಳು 12 ದಿನಗಳೊಳಗೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಎ.ಜೆ. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಮತ್ತು ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ. ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ವರ್ಷದ ಡಿ. 11ರಂದು ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬದವರು ಮುಂದೆ ಬಂದರು. ಫಾದರ್ ಮುಲ್ಲ ರ್ ಆಸ್ಪತ್ರೆಯಲ್ಲಿ 12ರಂದು ಶಸ್ತ್ರ ಚಿಕಿತ್ಸೆ ಮಾಡಿ ಅಂಗಾಂಗಗಳನ್ನು ಬೆಂಗಳೂರು, ಚೆನ್ನೈ, ಮಣಿಪಾಲ ಹಾಗೂ ಮೂತ್ರ ಪಿಂಡ (ಕಿಡ್ನಿ)ಗಳನ್ನು ಎ.ಜೆ.ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಂಗಾಂಗಗಳನ್ನು ನಿಗದಿತ ಸಮಯದಲ್ಲಿ ರೋಗಿಗಳಿಗೆ ಜೋಡಿಸಬೇಕಾಗುತ್ತದೆ ಎಂದರು.
ಸಾಮಾನ್ಯವಾಗಿ ಎರಡು ಅಂಗಗಳು ಒಂದೇ ಆಸ್ಪತ್ರೆಗೆ ದೊರೆಯುವುದು ಬಹಳ ಅಪರೂಪ. ಇಂತಹ ವಿಶೇಷ ಸನ್ನಿವೇಶದಲ್ಲಿ ಎ.ಜೆ. ಆಸ್ಪತ್ರೆಯ ಡಾ. ಪ್ರಶಾಂತ್ ಮಾರ್ಲ, ಡಾ. ಪ್ರೀತಮ್ ಶರ್ಮಾ, ಡಾ. ರೋಶನ್ ವಿ. ಶೆಟ್ಟಿ (ಕಸಿ ಶಸ್ತ್ರಚಿಕಿತ್ಸಕರು), ಡಾ. ರಾಘವೇಂದ್ರ ನಾಯಕ್ (ನೆಫ್ರಾಲಜಿಸ್ಟ್), ಡಾ.ಹರೀಶ್ ಕಾರಂತ್ (ಅರಿವಳಿಕೆ ತಜ್ಞ )ಸೌಮ್ಯ (ಕಸಿ ಸಂಯೋಜಕಿ), ಲೀಲಾವತಿ ಹೆಗ್ಡೆ (ಡಯಾಲಿಸಿಸ್ ವಿಭಾಗ), ಸಿಬ್ಬಂದಿ ಸವಿನಾ ರೋಶ್ಮಿ, ಮಹಾಬಲ ಕಿಡ್ನಿಗಳ ಜೋಡೆಣೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಅಂಗಾಂಗ ದಾನದ ಪ್ರಕ್ರಿಯೆಯನ್ನು 2015 ರಲ್ಲಿ ಎ.ಜೆ. ಆಸ್ಪತ್ರೆ ಕೈಗೊಂಡಿತ್ತು . ಈ ಪ್ರಕ್ರಿಯೆಗೆ ಅವಿಭಜಿತ ದಕ್ಷಿಣ ಕನ್ನಡದ ಪ್ರಪ್ರಥಮ ದಾನಿಗಳಾದ ಜೀವನ್ ಮತ್ತು ಲೀನಾ ಅವರ ಹೆಸರನ್ನಿಡಲಾಗಿದೆ. ಇದು ‘ಜೀವನ್ ವಿಲೀನ’ ಎಂಬ ಹೆಸರಲ್ಲಿ ಪ್ರಖ್ಯಾತವಾಗಿದೆ. ಅಂದಿನಿಂದ ಇಂದಿನವರೆಗೂ 41 ದಾನಿಗಳಿಂದ ಪಡೆದ ಅಂಗಾಂಗಗಳ ಜೋಡಣೆಯಿಂದ ಸುಮಾರು 150 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಡಾ. ಪ್ರಶಾಂತ್ ಮಾರ್ಲ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಪ್ರೀತಮ್ ಶರ್ಮಾ, ಡಾ. ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.