ಅಡ್ಯಾರ್, ಅರ್ಕುಳ ಗ್ರಾಮಗಳು ಮಂಗಳೂರು 'ಎ 'ಹೋಬಳಿಗೆ ಸೇರ್ಪಡೆ
ಮಂಗಳೂರು: ಅಡ್ಯಾರ್ ಅರ್ಕುಳ ಗ್ರಾಮಗಳನ್ನು ಗುರುಪುರ ಕಂದಾಯ ಹೋಬಳಿಯಿಂದ ಪ್ರತ್ಯೇಕಿಸಿ ಮಂಗಳೂರು 'ಎ' ಹೋಬಳಿಗೆ ಸೇರಿಸಲು ಕರ್ನಾಟಕ ರಾಜ್ಯ ಸರಕಾರ ಪತ್ರದಲ್ಲಿ ಸೂಚಿಸಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇದರಿಂದ ಅಡ್ಯಾರ್, ಅರ್ಕುಳದ ಜನರಿಗೆ ಸಮಯ,ಅನಗತ್ಯ ಓಡಾಟ ತಪ್ಪಿದಂತಾಗಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆ ಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇನ್ನು ಮುಂದೆ ಮಂಗಳೂರು ಎ ಹೋಬಳಿ ಯಕಚೇರಿ ಇರುವ ಮಂಗಳೂರು ಮಿನಿ ವಿಧಾನ ಸೌಧಕ್ಕೆ ಬಂದು (ತಮ್ಮ ಕಂದಾಯ ಇಲಾಖೆಯ)ಕೆಲಸ ಮಾಡಿಕೊಳ್ಳಬಹುದಾಗಿದೆ ಎಂದು ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.
ಚರಂಡಿಯತ್ತ ಗಮನಹರಿಸದೇ ಲವ್ ಜಿಹಾದ್ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಿ ಎಂದು ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರು ನೀಡಿದ್ದ ಹೇಳಿಕೆ ಬಗ್ಗೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಳಿನ್ ಅವರು ಎಲ್ಲಿಯೂ ಕೂಡಾ ರಸ್ತೆ ವಿಚಾರ ಬಿಟ್ಟುಬಿಡಿ ಎಂದು ಹೇಳಿಲ್ಲ. ರಸ್ತೆ, ಚರಂಡಿ, ಅಭಿವೃದ್ಧಿ ಕೆಲಸ ಮಾಡಿಸುವುದು ಚುನಾಯಿತ ಜನಪ್ರತಿನಿಧಿಗಳು. ಪಕ್ಷದ ಕಾರ್ಯಕರ್ತರು ಸಮಾಜದ ಸ್ವಾಸ್ಥ್ಯ ಕೆಡದಂತೆ ಕೆಲಸ ಮಾಡಿರಿ ಎಂದು ಹೇಳಿದ್ದಾರೆ. ಸಾಮಾಜಿಕ ಪಿಡುಗುಗಳ ಬಗ್ಗೆಯೂ ಕಾರ್ಯಕರ್ತರು ಗಮನ ಹರಿಸಿಕೊಂಡು ಕೆಲಸ ಮಾಡಿರಿ ಎಂದು ಹೇಳಿದ್ದಾರೆ ಎಂದು ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಸಿದ್ಧರಾಮಯ್ಯನವರು ಹಿರಿಯ ನಾಯಕರು ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಮಾತಿನ ಬಗ್ಗೆ ಎಚ್ಚರ ವಹಿಸಬೇಕು ಎಂದು ಭರತ್ ಶೆಟ್ಟಿ ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿಗೆ ಸಿದ್ಧರಾಮಯ್ಯ ಅವರು ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾಯಿ, ಕತ್ತೆ ಹೆಸರನ್ನು ಕರೆಯುವುದು ಒಳ್ಳೆಯ ಟೇಸ್ಟ್ ಅಲ್ಲ. ನಾಯಿ ನಂಬಿಕೆಗೆ ಹೆಸರಾಗಿರುವ ಪ್ರಾಣಿ. ಆದರೆ ಅವರು ನಾಯಿಗೆ ಹೋಲಿಸಿದರೆ ಅದು ಒಳ್ಳೆಯ ವಿಷಯ. ಕೆಟ್ಟದಾಗಿ ಯೋಚಿಸಿದರೆ ಅದು ಕೆಟ್ಟ ವಿಚಾರ ಅವರು ಕೂಡಾ ನಾಯಿಯಾದ್ರೆ ಒಳ್ಳೆಯದು. ನಾಯಿಯಂತೆ ತನ್ನ ಪಕ್ಷಕ್ಕೆ ಪ್ರಾಮಾಣಿಕರಾಗಿ ಇದ್ದರೆ ಒಳ್ಳೆಯದು ಎಂದರು.







