ಉಡುಪಿ: ಬಾರಕೂರು ನೇಶನಲ್ ಹೈಸ್ಕೂಲ್‌ಗೆ ಅಮೃತಮಹೋತ್ಸವ ಸಂಭ್ರಮ

ಉಡುಪಿ: ಸ್ವಾತಂತ್ರ್ಯಪೂರ್ವದಲ್ಲಿ ಬಾರಕೂರು, ಬ್ರಹ್ಮಾವರ ಹಾಗೂ ಕೋಟ ಪರಿಸರದ ಜನತೆಗೆ ಹೈಸ್ಕೂಲ್ ಶಿಕ್ಷಣವನ್ನು ಒದಗಿಸಿದ, ಬಾರಕೂರು ವಿದ್ಯಾಭಿವರ್ಧಿನಿ ಸಂಘದಿಂದ 1946ರಲ್ಲಿ ಪ್ರಾರಂಭಗೊಂಡ ನೇಶನಲ್ ಪ್ರೌಢ ಶಾಲೆ ಇದೀಗ ಅಮೃತಮಹೋತ್ಸವದ ಸಂಭ್ರಮದಲ್ಲಿದ್ದು, ಜ.8ರಂದು ಇದನ್ನು ಆಚರಿಸಲಿದೆ ಎಂದು ಅಮೃತಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ರಾಜಾರಾಮ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶಾಲೆಯು 1972ರಲ್ಲಿ ರಜತ ಮಹೋತ್ಸವ, 1997ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಇದೀಗ ಜ.8ರಂದು ತನ್ನ ಅಮೃತಮಹೋತ್ಸವಕ್ಕೆ ಸಜ್ಜಾಗಿದೆ ಎಂದರು.
1946ರಲ್ಲಿ ಪ್ರಾರಂಭಗೊಂಡ ಪ್ರೌಢಶಾಲೆ, 1966ರಲ್ಲಿ ಹೈಯರ್ ಸೆಕಂಡರಿ ಶಾಲೆಯಾಗಿದ್ದು, 1972ರಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭ ಗೊಂಡಿತು. ವಿದ್ಯಾಭಿವರ್ಧಿನಿ ಸಂಘದ ವತಿಯಿಂದ 1983-84ರಲ್ಲಿ ಬಾರಕೂರಿನ ಹೇರಾಡಿಯಲ್ಲಿ ನೇಶನಲ್ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭಗೊಂಡಿದ್ದು, ಅದೀಗ ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕಾ ತರಬೇತಿ ಕೇಂದ್ರವಾಗಿದೆ ಎಂದರು.
ಆಧುನಿಕತೆಯ ಸಂಕೇತವಾಗಿ ಆಂಗ್ಲ ಭಾಷಾ ಶಿಕ್ಷಣದತ್ತ ಜನರು ಆಕರ್ಷಿತರಾದುದರಿಂದ ಸಂಘ 2003-04ರಲ್ಲಿ ಶ್ರೀವಿದ್ಯೇಶ ವಿದ್ಯಾಮಾನ್ಯ ನೇಶನಲ್ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸಿತು. ಅಲ್ಲದೇ ಸಂಘ ಇಂದು ಎರಡು ಪ್ರಾಥಮಿಕ ಶಾಲೆಗಳನ್ನು ಸಹ ನಡೆಸುತ್ತಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ವಿದ್ಯಾಭಿಮಾನಿಗಳ ನೆರವಿನಿಂದ ಅಮೃತಮಹೋತ್ಸವ ಸಮಾರಂಭ ನಡೆಯುತಿದ್ದು, ಮುಂದೆ ಕಟ್ಟಡಗಳ ನವೀಕರಣ, ವಿಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣದ ಪ್ರಯೋಗಾಲಯಗಳ ಉನ್ನತೀಕರಣ ಮುಂತಾದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಶಾಲೆಯ ಅಮೃತಮಹೋತ್ಸವ ಸಮಾರಂಭವನ್ನು ಜ.8ರ ಬೆಳಗ್ಗೆ 10ಗಂಟೆಗೆ ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ,ಡಿಡಿಪಿಯು ಮಾರುತಿ, ಡಿಡಿಪಿಐ ಶಿವರಾಜ್ ಮುಖ್ಯ ಅತಿಥಿಗಳಾಗಿರುವರು ಎಂದರು.
11:30ರಿಂದ ತಜ್ಞರ ಉಪಸ್ಥಿತಿಯಲ್ಲಿ ಹೊಸ ಶಿಕ್ಷಣ ನೀತಿ-2020ರ ಅವಲೋಕನ-ಅನುಷ್ಠಾನದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಮಾರೋಪ ಸಮಾರಂಭ ಸಂಜೆ 5:00ಗಂಟೆಗೆ ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ , ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಡಾ.ಮೋಹನ ಆಳ್ವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ರಾಜಾರಾಮ ಶೆಟ್ಟಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಎನ್.ಮಂಜುನಾಥ ಭಟ್, ವಿದ್ಯಾಭಿವರ್ಧಿನಿ ಸಂಘದ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಬಿ.ಸೀತಾರಾಮ ಶೆಟ್ಟಿ ಉಪಾಧ್ಯಕ್ಷ ಎಚ್.ವಿಠಲ ಶೆಟ್ಟಿ ಉಪಸ್ಥಿತರಿದ್ದರು.







