ಕೊಲ್ಲೂರು ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ: ಪ್ರವಾಸಿಗರು ನೈರ್ಮಲ್ಯಕ್ಕೆ ಒತ್ತು ನೀಡಬೇಕಾಗಿದೆ!

ಕುಂದಾಪುರ: ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ರಾಜ್ಯದ ಶ್ರೀಮಂತ ದೇವಸ್ಥಾನ ಗಳಲ್ಲಿ ಒಂದಾಗಿದೆ. ಪ್ರತಿದಿನ ರಾಜ್ಯ, ಹೊರರಾಜ್ಯಗಳ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತಿದ್ದರೂ ಕೊಲ್ಲೂರು, ಸ್ವಚ್ಛತೆ ಹಾಗೂ ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತದೆ.
ನೈರ್ಮಲ್ಯಕ್ಕಾಗಿ ಒಳಚರಂಡಿ, ಶೌಚಾಲಯಗಳಿದ್ದರೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಇಲ್ಲದಿರುವುದು ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಕೊಲ್ಲೂರಿನಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಕೊಲ್ಲೂರಿಗೆ ಪ್ರತಿದಿನ ಸಹಸ್ರ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ರಸ್ತೆಯ ಬದಿ ಹಾಗೂ ಬಸ್ ನಿಲ್ದಾಣಗಳೇ ಬಹುತೇಕ ಮಲಗಲು ಆಸರೆಯಾಗಿವೆ. ಇವರು ರಸ್ತೆ ಬದಿಯಲ್ಲೇ ದೇಹಬಾಧೆ ತೀರಿಸಿಕೊಳ್ಳುತ್ತಿದ್ದು, ಇದರಿಂದಾಗಿ ಕೊಲ್ಲೂರು ಪರಿಸರ ಗಬ್ಬೆದ್ದು ಹೋಗಿದೆ.
ಉಪಯೋಗಕ್ಕಿಲ್ಲದ 19 ಕೋಟಿ ವೆಚ್ಚದ ಒಳಚರಂಡಿ..!: ಕೊಲ್ಲೂರು ಪರಿಸರದ ಸ್ವಚ್ಛತೆ ನಿಟ್ಟಿನಲ್ಲಿ 19.97ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಬಂದ ಒಳಚರಂಡಿ ಏನಾಗಿದೆ ಎಂಬುದು ಯಕ್ಷಪ್ರಶ್ನೆ. ಈ ಬಗ್ಗೆ ವಿಶೇಷ ಸಮಿತಿ ರಚಿಸಿ ಸರಕಾರ ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೊಲ್ಲೂರು ವಸತಿ ಸಮುಚ್ಛಯ, ಹೊಟೇಲ್ ಮುಂಗಟ್ಟು, ಮನೆ, ವಾಣಿಜ್ಯ ಸಂಕೀರ್ಣದಿಂದ ಹೊರಬರುವ ತ್ಯಾಜ್ಯ ಕೊಲ್ಲೂರು ಬಳಸಿ ಹರಿವ ನದಿಗೆ ಸೇರುತ್ತಿದ್ದು, ಬೇಸಿಗೆಯಲ್ಲಿ ಸೌಪರ್ಣಿಕೆಯಲ್ಲಿ ಜಲಚರಗಳು ಸಾಯುತ್ತಿವೆ.
ಈ ಎಲ್ಲಾ ಅಪಸೌವ್ಯಗಳಿಗೆ ಯುಜಿಡಿ ಕಾಮಗಾರಿ ಪರಿಹಾರ ಎಂದು ಹೇಳಲಾಗುತ್ತಿತ್ತು. ಆದರೆ ಒಳಚರಂಡಿ, ಪೈಪ್‌ಲೈನ್ ಅಳವಡಿಕೆ ಎಲ್ಲವೂ ಅಯೋಮಯವಾಗಿದೆ. ರೀಸೈಕ್ಲಿಂಗ್ ಎತ್ತರದ ಸ್ಥಳದಲ್ಲಿದ್ದು, ನೀರು ಏರಬೇಕಿದ್ದರೆ ಪಂಪ್ ಮಾಡುವ ಸ್ಥಿತಿಯಿದೆ. ಯೋಜನೆ ಸಮರ್ಪಕವಾಗಿ ಆಗಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ಸರಿ ಮಾಡಿಕೊಟ್ಟರೆ ನಿರ್ವಹಣೆ ಗ್ರಾಪಂ ವಹಿಸಿ ಕೊಳ್ಳಲಿದ್ದು, ಈಗಿರುವ ಸ್ಥಿತಿಯಲ್ಲಿ ಹತ್ತಾಂತರದಲ್ಲಿ ಪಡೆದರೆ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಗ್ರಾಪಂ ಹೇಳುತ್ತಿದೆ.
ಕೊಲ್ಲೂರಿನ ಆಯಕಟ್ಟು ಜಾಗದಲ್ಲಿ ಶೌಚಾಲಯವಿದ್ದರೂ ಜಾತ್ರೆ, ಉತ್ಸವ, ರಥೋತ್ಸವ, ಸರ್ಕಾರಿ ರಜೆ, ಶಾಲಾ ಮಕ್ಕಳ ಪ್ರವಾಸಿ, ಶಬರಿಮಲೆ ಯಾತ್ರೆ ಸಮಯದಲ್ಲಿ ಯಾತ್ರಾರ್ಥಿಗಳ ಒತ್ತಡ ಹೆಚ್ಚಿದ್ದು, ವಿಶೇಷ ದಿನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುವುದರಿಂದ ಶೌಚ ಹಾಗೂ ಪಾರ್ಕಿಂಗ್ ಸಮಸ್ಯೆ ಕಾಡುತ್ತದೆ. ಯಾತ್ರಾರ್ಥಿಗಳ ಒತ್ತಡ ಸಮಯದಲ್ಲಿ ಆಯಕಟ್ಟು ಜಾಗದಲ್ಲಿ ಮೊಬೈಲ್ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಮಾಡುವ ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಪಾರ್ಕಿಂಗ್, ಬಸ್ ನಿಲ್ದಾಣ, ಗೋಶಾಲೆ ಜಾಗದಲ್ಲಿ ಸಿಸಿಟಿವಿ ಹಾಗೂ ಬೆಳಕಿನ ವ್ಯವಸ್ಥೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಚಂದ್ರಶೇಖರ ಶೆಟ್ಟಿ ಕೆರಾಡಿ, ಅಧ್ಯಕ್ಷ, ಶ್ರೀಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಕೊಲ್ಲೂರು.