ಸಿಯಾಚಿನ್ ಗ್ಲೇಸಿಯರ್ ನಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನಿಯೋಜಿಸಿದ ಸೇನೆ

ಹೊಸದಿಲ್ಲಿ,ಜ.4: ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿಯಾಗಿರುವ ಸಿಯಾಚಿನ್ ಗ್ಲೇಸಿಯರ್ನ ಕುಮಾರ ಪೋಸ್ಟ್ ನಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಕ್ಯಾ.ಶಿವ ಚೌಹಾಣ ಅವರನ್ನು ಭಾರತೀಯ ಸೇನೆಯು ನಿಯೋಜಿಸಿದೆ. ಚವಾಣ ಸಮುದ್ರಮಟ್ಟದಿಂದ 15,632 ಅಡಿ ಎತ್ತರದಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಮೊದಲ ಮಹಿಳಾ ಸೇನಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಮಹಿಳಾ ಅಧಿಕಾರಿಗಳನ್ನು ತಮ್ಮ ಯೂನಿಟ್ಗಳೊಂದಿಗೆ ನಿಯಮಿತ ನಿಯೋಜನೆಗಳ ಭಾಗವಾಗಿ ಸುಮಾರು 9,000 ಅಡಿ ಎತ್ತರದದಲ್ಲಿರುವ ಸಿಯಾಚಿನ್ ಮೂಲ ಶಿಬಿರಕ್ಕೆ ನೇಮಕ ಮಾಡಲಾಗಿತ್ತು.
ರಾಜಸ್ಥಾನದ ಚೌಹಾಣ ಬೆಂಗಾಳ ಸ್ಯಾಪರ್ ಅಧಿಕಾರಿಯಾಗಿದ್ದು, ಉದಯಪುರದ ಎನ್ಜೆಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಗಳಿಸಿದ್ದಾರೆ. 11ರ ಹರೆಯದಲ್ಲಿದ್ದಾಗ ಚೌಹಾಣ ತಂದೆಯನ್ನು ಕಳೆದುಕೊಂಡಿದ್ದು,ಗೃಹಿಣಿಯಾಗಿರುವ ತಾಯಿ ಪುತ್ರಿಯ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿದ್ದರು. ಬಾಲ್ಯದಿಂದಲೇ ಸೇನೆಯನ್ನು ಸೇರಬೇಕೆಂಬ ಆಕಾಂಕ್ಷೆ ಹೊಂದಿದ್ದ ಚೌಹಾಣ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡಮಿಯಲ್ಲಿ ತರಬೇತಿಯ ಬಳಿಕ ಮೇ 2021ರಲ್ಲಿ ಇಂಜಿನಿಯರ್ ರೆಜಿಮೆಂಟ್ಗೆ ಸೇರ್ಪಡೆಗೊಂಡಿದ್ದರು ಎಂದು ಸೇನೆಯ ಮೂಲಗಳು ತಿಳಿಸಿವೆ.
ಸೋಮವಾರ ಸಿಯಾಚಿನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಚೌಹಾಣ್ ಸ್ಯಾಪರ್ಗಳ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ ಮತ್ತು ಈ ತಂಡವು ಅಲ್ಲಿ ಮೂರು ತಿಂಗಳ ಕಾಲ ಕರ್ತವ್ಯ ನಿರ್ವಹಿಸಲಿದೆ.
ಕುಮಾರ ಪೋಸ್ಟ್ ಉತ್ತರ ಗ್ಲೇಸಿಯರ್ ಬಟಾಲಿಯನ್ನ ಕೇಂದ್ರ ಕಚೇರಿಯಾಗಿದ್ದು,ಸಿಯಾಚಿನ್ ಗ್ಲೇಸಿಯರ್ನ್ನು ಭಾರತವು ವಶಪಡಿಸಿಕೊಳ್ಳಲು ನೆರವಾಗಿದ್ದ ಅಪ್ರತಿಮ ಪರ್ವತಾರೋಹಿ ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಅವರ ಹೆಸರನ್ನು ಹೊಂದಿದೆ.







