ಕಡಬ: ಬಲ್ಯ ಗ್ರಾಮದಲ್ಲಿ ಹದಗೆಟ್ಟ ರಸ್ತೆ; ಕಾಮಗಾರಿ ಶಿಲಾನ್ಯಾಸಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮಸ್ಥರ ತರಾಟೆ

ಕಡಬ: ತಾಲೂಕಿನ ಬಲ್ಯ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿಬಂದಿದ್ದು, ಈ ನಡುವೆ ನೂತನ ಕಾಮಗಾರಿಗಳ ಶಿಲಾನ್ಯಾಸಕ್ಕೆ ಆಗಮಿಸಿದ ಮೀನುಗಾರಿಕೆ ಸಚಿವ, ಸುಳ್ಯ ಶಾಸಕ ಎಸ್.ಅಂಗಾರರನ್ನು ಗ್ರಾಮಸ್ಥರು ತರಾಟೆಗೆತ್ತಿಕೊಂಡ ಘಟನೆ ಬಲ್ಯ ಗ್ರಾಮದಲ್ಲಿ ನಡೆದಿದೆ.
ಬಲ್ಯ ಗ್ರಾಮದಲ್ಲಿ 85 ಲಕ್ಷ ರೂ. ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲು ಸೋಮವಾರ ಸಚಿವ ಎಸ್. ಅಂಗಾರ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಲು ಸಚಿವರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಂಗಾರ ಮತ್ತು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಲ್ಯ ಗ್ರಾಮದಲ್ಲಿ ಈಗಾಗಲೇ ಹಲವು ಕಾಮಗಾರಿಗಳ ಶಿಲಾನ್ಯಾಸ ನಡೆದರೂ ಕಾಮಗಾರಿಗಳು ಇನ್ನು ಕೂಡಾ ಪ್ರಾರಂಭವಾಗಿಲ್ಲ. ಇಲ್ಲಿನ ರಸ್ತೆಯೊಂದರ ಕಾಮಗಾರಿ ಆರಂಭಿಸುವಂತೆ ಖುದ್ದು ಪ್ರಧಾನ ಮಂತ್ರಿ ಕಾರ್ಯಾಲಯದಿಂದಲೇ ಆದೇಶಿಸಲಾಗಿತ್ತು. ಆದರೂ ವಿವಿಧ ನೆಪವೊಡ್ಡಿ ಕಾಮಗಾರಿ ಪ್ರಾರಂಭಿಸಲು ಆರಂಭಿಸಲೇ ಇಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಕಾಮಗಾರಿಗಳ ಶಂಕುಸ್ಥಾಪನೆಯ ವೇಳೆ ಗ್ರಾಮಸ್ಥರು ಈ ಹಿಂದಿನ ಕಾಮಗಾರಿಗಳ ವಿಳಂಬದ ಬಗ್ಗೆ ಸಚಿವರನ್ನು ಪ್ರಶ್ನೆ ಮಾಡಿದರು. ಇದು ಸಚಿವರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಈ ವೇಳೆ ಸಚಿವರು, ‘‘ನೀವು ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ. ಸರಕಾರ ಹಣ ಕೊಡಬೇಕು. ನೀವು ಮನವಿ ಕೊಡಿ, ಬಿಡಿ. ನಾನು ಮಾಡುವ ಕೆಲಸ ಮಾಡುತ್ತೇನೆ. ನೀವು ಮನವಿ ಕೊಟ್ಟು 4 ವರ್ಷವಾಗಿದೆ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೋವಿಡ್, ಪ್ರಾಕೃತಿಕ ವಿಕೋಪದಿಂದ ಸಮಸ್ಯೆಯಾಯಿತು’’ ಎಂದು ಸ್ಪಷ್ಟನೆ ನೀಡಿದರು. ಆದರೆ ಸಚಿವರ ಈ ಸಮಜಾಯಿಷಿಯಿಂದ ಸಂತುಷ್ಟರಾಗದ ಗ್ರಾಮಸ್ಥರು ಅಲ್ಲಿಂದ ತೆರಳಿದರು.
ಮತದಾನ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷ!
ಈ ನಡುವೆ ಬಲ್ಯ ಗ್ರಾಮದ ಬಹುತೇಕ ಕಡೆಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.
‘ಬಲ್ಯ ಗ್ರಾಮದ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿದೆ. ಈ ರಸ್ತೆಗಳನ್ನು ಊರವರೇ ತಾವು ದುಡಿದ ಹಣದಿಂದ ಸರಿಪಡಿಸುವ ಪರಿಸ್ಥಿತಿ ಎದುರಾಗಿದೆ. ಗ್ರಾಮವ್ಯಾಪ್ತಿಯ ಸುಮಾರು 15 ಕಿ.ಮೀ.ನಷ್ಟು ರಸ್ತೆಯನ್ನು ಸರಿಪಡಿಸುವವರೆಗೆ ಊರವವರು ಒಮ್ಮತದಿಂದ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.