ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಗಳ ವಿರುದ್ಧ ದನಿ ಎತ್ತಿ: ವೀರಭದ್ರ ಚನ್ನಮಲ್ಲ ಸ್ವಾಮಿ
ಹುಲಿಕಲ್ ನಟರಾಜ್‍ರ ‘ಹುಲಿಹೆಜ್ಜೆ’ ಅಭಿನಂದನಾ ಗ್ರಂಥ ಬಿಡುಗಡೆ
ಬೆಂಗಳೂರು, ಜ.4: ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಸುವ ಶೋಷಣೆ, ಅನ್ಯಾಯಗಳ ವಿರುದ್ಧ ದನಿ ಎತ್ತಬೇಕು ಎಂದು ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲ ಸ್ವಾಮಿ ಸಲಹೆ ನೀಡಿದ್ದಾರೆ.
ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹುಲಿಕಲ್ ನಟರಾಜ್ ಅವರ ‘ಹುಲಿಹೆಜ್ಜೆ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ವೈಚಾರಿಕ ಚಿಂತಕರು ದೇವರು ಮತ್ತು ಧರ್ಮದ ವಿರುದ್ಧ ಹೋಗಬಾರದು. ವ್ಯಕ್ತಿ, ಸಮಾಜಕ್ಕೆ ಕಂಠಕವಾಗುವ ಮೂಢನಂಬಿಕೆಗಳ ವಿರುದ್ಧ ನಡೆಯಬೇಕು. ಸಾಮಾಜಿಕವಾಗಿ ಹಾನಿಯಿಲ್ಲದ ನಂಬಿಕೆಗಳು ತಪ್ಪಲ್ಲ. ಆದರೆ, ಸಮುದಾಯವನ್ನು ದೂಡುವ, ತಾರತಮ್ಯ ಹುಟ್ಟುಹಾಕುವ ವಿಭಜಕ ನಂಬಿಕೆಗಳನ್ನು ನಂಬಬಾರದು ಎಂದು ಎಚ್ಚರಿಕೆ ನೀಡಿದರು.
ಅಜ್ಞಾನ, ಮೌಢ್ಯ, ಶೋಷಣೆ, ಕಂಠಕಗಳ ವಿರುದ್ಧ ಹೋರಾಟ ಮಾಡಲು ಎಂಟೆದೆ ಧೈರ್ಯ ಬೇಕಾಗುತ್ತದೆ. ಹುಲಿಕಲ್ ನಟರಾಜ್ ಅವರಿಗೆ ಅಂತಹ ಧೈರ್ಯವಿದೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಟ ಮಾಡುತ್ತಾ ಸತ್ಯದಿಂದ ಅಸತ್ಯವನ್ನು ಎದುರಿಸುತ್ತಾರೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ವೈಜ್ಞಾನಿಕ, ವೈಚಾರಿಕ ಪರಂಪರೆ ಹೊಸದಲ್ಲ. ವೇದ ಉಪನಿಷತ್ತುಗಳಲ್ಲೇ ಈ ಬಗ್ಗೆ ಉಲ್ಲೇಖಿಸಲಾಗಿಸಲಾಗಿದೆ. ಆ ಕಾಲದ ವಿದ್ವಾಂಸರು ಅಂಧ ಶಕ್ತಿಯನ್ನು ವಿರೋಧಿಸಿದ್ದರು. ಜ್ಞಾನ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿದ್ದರು ಎಂದು ತಿಳಿಸಿದರು.
ನಿವೃತ್ತ ನ್ಯಾಯಾಧೀಶ ಎನ್.ಸಂತೋಷ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಮೂಢನಂಬಿಕೆಗಳಿಂದ ಉಂಟಾಗುವ ಅನ್ಯಾಯವನ್ನು ಮತ್ತಷ್ಟು ಬಯಲಿಗೆಳೆಯುವ ಕೆಲಸ ನಟರಾಜ್ ಅವರಿಂದ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.
ಸಾಹಿತಿ ಡಾ.ಕುಂ.ವೀರಭದ್ರಪ್ಪ ಮಾತನಾಡಿ, ಕರ್ನಾಟಕ ಮೂಢನಂಬಿಕೆಗಳ ಹುಟ್ಟುವಳಿ, ವಿತರಣಾ ಸಂಸ್ಥೆಯಾಗಿದೆ. ಬೇರೆ ಎಲ್ಲೂ ಇಲ್ಲದ ಮೂಢನಂಬಿಕೆ ರಾಜ್ಯದಲ್ಲಿವೆ. ನಮ್ಮಲ್ಲಿ ವೈಚಾರಿಕ, ವೈಜ್ಞಾನಿಕ ಮನಸ್ಸು ಬೆಳೆಯಬೇಕು ಎಂದರು.
ವಿಧಾನಸೌಧದ ರಾಜಕಾರಣಿಗಳ ಮೈಯಲ್ಲಿರುವ ದೆವ್ವ, ದೇವರುಗಳನ್ನು ಬಿಡಿಸುವ ಕೆಲಸ ಮಾಡಬೇಕು. ಅತ್ಯಂತ ಪ್ರಸಿದ್ಧ, ಗೌರವಾನ್ವಿತ ಕಟ್ಟಡದಂತಿರುವ ವಿಧಾನಸೌಧದಲ್ಲಿ ಮೂಢನಂಬಿಕೆಗಳ ಆಗರವೇ ಅಡಗಿದೆ. ಅಲ್ಲಿ ನಿಂಬೆಹಣ್ಣು, ಜ್ಯೋತಿಷ್ಯದ ಚರ್ಚೆಗಳಾಗುತ್ತದೆ. ದೈವ, ಮೂಢನಂಬಿಕೆಗಳಿಂದ ಮುಕ್ತರಾದಾಗ ಮಾತ್ರ ರಾಜ್ಯ ಉದ್ದಾರವಾಗಲು ಸಾಧ್ಯ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಟಿ.ಎಸ್ ನಾಗಾಭರಣ ಮಾತನಾಡಿ, ಆಚಾರ, ವಿಚಾರಗಳ ನಡುವಿನ ಅನಾಚಾರವನ್ನು ಹೋಗಲಾಡಿಸಲು ನಟರಾಜ್‍ನಂತಹ ಚಿಂತಕರ ಅಗತ್ಯವಿದೆ. ಎಲ್ಲವನ್ನೂ ಪ್ರಶ್ನಿಸಿ ಒಪ್ಪಿಕೊಳ್ಳುವ ಗುಣ ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಪವಾಡ ಭಂಜಕ ಹುಲಿಕಲ್ ನಟರಾಜ್ ಮಾತನಾಡಿ, ಮೌಢ್ಯತೆ ತುಂಬಿದ ಕುಟುಂಬ ನಮ್ಮದಾಗಿತ್ತು. ಅಮ್ಮನಿಗಾದ ಒಂದು ಅವಮಾನ ನನ್ನ ಚಿಂತನೆಯ ದಿಕ್ಕನೇ ಬದಲಿಸಿ ವೈಜ್ಞಾನಿಕತೆಯ ಕಡೆಗೆ ದಬ್ಬಿತು. ಅಂದಿನಿಂದ ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಬೀಜವನ್ನು ಬಿತ್ತಿದೆ. ಅವಮಾನವನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ನನಗೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ನನ್ನ ವೈಜ್ಞಾನಿಕ, ವೈಚಾರಿಕತೆಗೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‍ಕುಮಾರ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಉಪಸ್ಥಿತರಿದ್ದರು.
ನಾವು ಹಿಂದುಗಳಲ್ಲ!: ‘ತಳ ಸಮುದಾಯದಿಂದ ಬಂದ ನಾವು ಹಿಂದೂಗಳಲ್ಲ, ದ್ರಾವಿಡರು. ಹಿಂದುತ್ವ ಜಪಿಸುವ ಶೇಕಡ ಒಂದೂವರೆಯಷ್ಟು ಜನರು ಮಂತ್ರ ಪೂಜೆಗಳಿಂದ ಬದುಕಿದ್ದರೆ, ನಾವು ಅಂಬೇಡ್ಕರ್, ಬಸವಣ್ಣ, ಬುದ್ದನಿಂದ ಬದುಕಿದ್ದೇವೆ’
-ಡಾ.ಕುಂ.ವೀರಭದ್ರಪ್ಪ, ಸಾಹಿತಿ
----------------------------------
‘ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳ ವೈಜ್ಞಾನಿಕ, ಸಾಮಾಜಿಕ ಚಿಂತನೆಗಳು ಸಮಾಜಕ್ಕೆ ಸಮಾಧಾನವನ್ನು ಹುಟ್ಟು ಹಾಕುತ್ತವೆ. ಸಮಾಜಕ್ಕೆ ಮಂತ್ರ ವೈದ್ಯಕ್ಕಿಂತ ಶಸ್ತ್ರ ವೈದ್ಯದ ಅಗತ್ಯವಿದೆ. ಸಿದ್ದೇಶ್ವರ ಶ್ರೀಗಳು ಸಮಾಜಕ್ಕೆ ಶಸ್ತ್ರ ಚಿಕಿತ್ಸೆ ನೀಡುತ್ತಿದ್ದರು’
-ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ, ನಿಡುಮಾಮಿಡಿ ಮಠ







