ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್ ಔಟ್

ಪುಣೆ: ಭಾರತ ಟಿ20 ತಂಡದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮೊಣಕಾಲು ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಮಂಗಳವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಬೌಂಡರಿ ಲೈನ್‌ನಲ್ಲಿ ಚಂಡು ತಡೆಯುವ ಯತ್ನದಲ್ಲಿ ಸ್ಯಾಮ್ಸನ್ ಗಾಯಗೊಂಡಿದ್ದರು. "ಸ್ಯಾಮ್ಸನ್ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ತಜ್ಞರ ಸಲಹೆಗಾಗಿ ಮುಂಬೈಗೆ ಕರೆದೊಯ್ದಿದ್ದು, ಅವರಿಗೆ ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ಸಲಹೆ ಮಾಡಲಾಗಿದೆ" ಎಂದು ಬಿಸಿಸಿಐ ಪ್ರಕಟಣೆ ಹೇಳಿದೆ.
ಸ್ಯಾಮ್ಸನ್ ಅವರ ಜಾಗಕ್ಕೆ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲು ಆಯ್ಕೆ ಸಮಿತಿ ಬುಧವಾರ ನಿರ್ಧರಿಸಿದೆ. ಮೊದಲ ಪಂದ್ಯದಲ್ಲಿ ರೋಚಕ 2 ರನ್‌ಗಳ ಜಯ ಸಾಧಿಸಿದ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ. ಗುರುವಾರ ಪುಣೆಯಲ್ಲಿ ಎರಡನೇ ಪಂದ್ಯ ನಡೆಯಲಿದೆ.
ಸ್ಯಾಮ್ಸನ್ ಗಾಯಗೊಂಡಿರುವುದರಿಂದ ರಾಹುಲ್ ತ್ರಿಪಾಠಿ ಭಾರತ ತಂಡದ ಪರ ಆಡುವ ಅವಕಾಶ ಪಡೆಯುವ ನಿರೀಕ್ಷೆ ಇದೆ. ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವ ತ್ರಿಪಾಠಿ ಈಗಾಗಲೇ ತಂಡದಲ್ಲಿದ್ದು, ಚೊಚ್ಚಲ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ.