ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ: ನಿತಿನ್ ಗಡ್ಕರಿ

ಬೆಂಗಳೂರು, ಜ.5: ಬೆಂಗಳೂರು-ಮೈಸೂರು ನಡುವಿನ ದಶಪಥಗಳ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಉದ್ಘಾಟಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅಥವಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಗುರುವಾರ ಬೆಂಗಳೂರು-ಮೈಸೂರು ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಿ, ರಾಮನಗರ ಬಳಿ ಹೆದ್ದಾರಿಯ ಮಧ್ಯೆ ನಿರ್ಮಿಸಲಾಗಿದ್ದ ವಿಶೇಷ ಹೆಲಿಪ್ಯಾಡ್‍ನಲ್ಲಿ ಬಂದಿಳಿದ ಬಳಿಕ ಜಿಗೇನಹಳ್ಳಿಯ ಟೋಲ್ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನಗರ ಮತ್ತು ಹಳ್ಳಿಗಳ ಒಳಗೆ ರಸ್ತೆ ಹೋಗುವುದನ್ನು ತಪ್ಪಿಸಿ 53 ಕಿ.ಮೀ ಹೊರವರ್ತುಲ ರಸ್ತೆ ನಿರ್ಮಿಸಲಾಗಿದೆ. ಬೆಂಗಳೂರು ನಿಂದ ಮೈಸೂರನ್ನು ಇನ್ನು ಮುಂದೆ ಕೇವಲ ಒಂದು ಗಂಟೆ ಇಪ್ಪತ್ತು ನಿಮಿಷದಲ್ಲಿ ತಲುಪಬಹುದು. ಇದರಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಹೆದ್ದಾರಿಯ ಉಳಿದ ಕಾಮಗಾರಿಗಳು ಫೆ.23 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
6 ಪಥದ ರಸ್ತೆಯಲ್ಲಿ ನಾಲ್ಕು ಪಥದ ಹೆದ್ದಾರಿ ರಸ್ತೆ ಉಳಿದ ಎರಡು ರಸ್ತೆಗಳನ್ನು ಸರ್ವಿಸ್ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ರಸ್ತೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಯಾವುದೇ ಅಪಘಾತ ಸಂಭವಿಸದ ರೀತಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಶಾಸಕರು ಮತ್ತು ಸಂಸದರು ಹೆದ್ದಾರಿಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನೆಲ್ಲ ಪರಿಶೀಲನೆ ಮಾಡಲಾಗುವುದು ಎಂದು ನಿತೀನ್ ಗಡ್ಕರಿ ಹೇಳಿದರು.
ಈ ಹೆದ್ದಾರಿಯಿಂದ ಇಲ್ಲಿನ ಕೈಗಾರಿಕೆ ಮತ್ತು ಐ.ಟಿ.ಕೈಗಾರಿಕೋದ್ಯಮಗಳಿಗೆ ಅನುಕೂಲಕರವಾಗಲಿದೆ. ಇನ್ನು ಹೆಚ್ಚಿನ ಕೈಗಾರಿಕೆಗಳು ತೆರೆಯಲು ಸಹಾಯಕವಾಗಲಿದೆ. ಅತಿ ಮುಖ್ಯವಾಗಿ ಬೃಹತ್ ಕೈಗಾರಿಕೆಗಳನ್ನು ಒಳಗೊಂಡಿರುವ ಕುಂಬಳಗೂಡು ಕೈಗಾರಿಕಾ ಪ್ರದೇಶ, ಬಿಡದಿ ಕೈಗಾರಿಕಾ ಪ್ರದೇಶ, ಗೆಜ್ಜಲೆಗೆರೆ ಕೈಗಾರಿಕಾ ಪ್ರದೇಶ ಮತ್ತು ತುಬನಕೆರೆ ಕೈಗಾರಿಕಾ ಪ್ರದೇಶಗಳಿಗೆ ಇನ್ನು ಹೆಚ್ಚು ಸರಕು ಸಾಗಾಣಿಕೆಗೆ ಅನುಕೂಲಕರವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹಾಗೂ ಮೂಲಭೂತ ಸಮಸ್ಯೆಯಿಂದ ವಿದ್ಯಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ಐಟಿ ಕಂಪನಿಗಳು ಹೂಡಿಕೆ ಮಾಡಲು ಹಿಂದೆ ಸರಿಯುತ್ತಿದ್ದಾರೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯಿಂದ ರಾಮನಗರ, ಮಂಡ್ಯ ಹಾಗೂ ಮೈಸೂರಿನ ಭಾಗದಲ್ಲಿ ಇನ್ನು ಹೆಚ್ಚು ವಿದ್ಯಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ಐಟಿ ಕಂಪನಿಗಳು ಸ್ಥಾಪನೆಯಾಗಲು ಸಹಕಾರಿಯಾಗಲಿದೆ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಡಬ್ಬಲ್ ಡೆಕ್ಕರ್ ಬಸ್: ಸಾರಿಗೆ ಸೇವೆಗಳನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ವಿದೇಶಗಳಲ್ಲಿರುವಂತೆ ಬೆಂಗಳೂರು-ಮೈಸೂರು ನಡುವೆ ಡಬ್ಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಆ ಸಂಬಂಧ ವೋಲ್ವೋ ಸಂಸ್ಥೆಯೊಂದಿಗೆ ಮಾತುಕತೆಯಾಗಿದೆ ಎಂದು ನಿತೀನ್ ಗಡ್ಕರಿ ಹೇಳಿದರು.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಬಸ್ ಓಡಾಡುವುದರಿಂದ ಪ್ರಯಾಣಿಕರು ತಮ್ಮ ವಾಹನಗಳನ್ನ ಬಳಸುವುದು ಕಡಿಮೆಯಾಗುವ ನಿರೀಕ್ಷೆಯಿದೆ. ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಡಬ್ಬಲ್ ಡೆಕ್ಕರ್ ಬಸ್ ಹಾಗೂ ಸ್ಕೈ ವಾಕ್ ಗಳ ನಿರ್ಮಾಣದ ಬಗ್ಗೆ ತೀರ್ಮಾನಿಸುವುದಾಗಿ ನಿತೀನ್ ಗಡ್ಕರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಂಸದರಾದ ಡಿ.ಕೆ.ಸುರೇಶ್, ಪ್ರತಾಪ್ ಸಿಂಹ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಗೌತಮ್ ಗೌಡ, ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ಇತರರು ಉಪಸ್ಥಿತರಿದ್ದರು.
ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಕಾಮಗಾರಿ: ಬೆಂಗಳೂರು-ಚೆನ್ನೈ ನಡುವೆ ಸಂಪರ್ಕ ಕಲ್ಪಿಸುವ 16,730 ಕೋಟಿ ರೂ.ವೆಚ್ಚದ 262 ಕಿ.ಮೀ.ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಕಾಮಗಾರಿಯನ್ನು ಕೇಂದ್ರ ಭೂ ಸಾರಿಗೆ ನಿತೀನ್ ಗಡ್ಕರಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






.jpg)
.jpg)

