ಮಂಗಳೂರು: ಬೇಡಿಕೆ ಈಡೇರಿದರೂ ಪಾದಯಾತ್ರೆ ನಿಲ್ಲದು : ಪ್ರಣವಾನಂದ ಶ್ರೀ

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪನೆ ಸೇರಿದಂತೆ 10 ಬೇಡಿಕೆಗಳನ್ನು ಸರಕಾರ ಈಡೇರಿಸಿದರೂ, ನಮ್ಮ ಪಾದಯಾತ್ರೆ ನಿಲ್ಲದು. ಸಮಾಜದ ಜಾಗೃತಿಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಶುಕ್ರವಾರ ಪ್ರಾರಂಭವಾಗಲಿರುವ ಪಾದಯಾತ್ರೆ ಬೆಂಗಳೂರು ವಿಧಾನಸೌಧ ತನಕದ (658 ಕಿ.ಮೀ) ಪಾದಯಾತ್ರೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪಾದಯಾತ್ರೆ ಯಾವುದೇ ಪಕ್ಷ, ಸರಕಾರದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಳೂರು ಭಾಗದ ಬಿಲ್ಲವ ಸಮದಾಯದ 21 ಮಂದಿ ಯುವಕರು ಧರ್ಮದ ರಾಜಕಾರಣದಲ್ಲಿ ಹತ್ಯೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವಸ್ಥೆ ಬರಬಾರದು. ನಮ್ಮ ಸಮುದಾಯದ ಯುವಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಈ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಎಲ್ಲ ಹತ್ತು ಬೇಡಿಕೆಗಳು ಸಚಿವ ಸಂಪುಟದ ಮುಂದಿಟ್ಟು, ಅಂಗೀಕಾರ ಪಡೆಯಲು ಸಾಧ್ಯವಿರುವಂತದ್ದು. ಪಾದಯಾತ್ರೆ ಕೈಗೊಂಡಿರುವ ನನಗೆ ಹಲವು ಬೆದರಿಕೆಗಳು ಬಂದಿದೆ. ಸರಕಾರದ ಕಡೆಯಿಂದಲೂ ಬೆದರಿಕೆ ಇದೆ. ಆದರೆ ಯಾವುದಕ್ಕೂ ನಾನು ಜಗ್ಗುವುದಿಲ್ಲ. ದೇಹದಲ್ಲಿ ಜೀವ ಇರುವ ತನಕ ಹೋರಾಡುತ್ತೇನೆ. ನನ್ನ ಜೀವನವನ್ನು ಸಮಾಜಕ್ಕಾಗಿ ಅರ್ಪಿಸುತ್ತೇನೆ ಎಂದು ಹೇಳಿದರು.
ಪಾದಯಾತ್ರೆಗೆ ಸುಮಾರು ಒಂದೂವರೆ ಕೋಟಿ ಖರ್ಚಾಗಲಿದೆ. ನನ್ನಲ್ಲಿ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ಆದರೆ ಸಮದಾಯದ ಕಟ್ಟಕಡೆಯ ವ್ಯಕ್ತಿಗಳು ನನ್ನೊಂದಿಗೆ ಇದ್ದಾರೆ. ಬಿಲ್ಲವ, ಈಡಿಗ ನಾಮದಾರಿ ಸಮುದಾಯದ ಜನಸಾಮಾನ್ಯರು ದುಡಿದು ಗಳಿಸುವ ಆದಾಯದಿಂದ ನೀಡುವ ಕೊಡುಗೆಯನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳಿಂದ ನಾವು ಹಣ ಪಡೆಯುವುದಿಲ್ಲ ಎಂದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪಾದಯಾತ್ರೆಗೆ ಕೇಂದ್ರ ಸಚಿವ ಬಿ .ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ. ದೇವಸ್ಥಾನದಿಂದ ಬೆಳಗ್ಗೆ 11 ಗಂಟೆಗೆ ಪಾದಯಾತ್ರೆ ಹೊರಡಲಿದೆ. ಸುಮಾರು 10 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಶಿವಗಿರಿ ಮಠದ ಶ್ರಿ ವಿಸ್ರುತಾತ್ಮನಂದ ಸ್ವಾಮೀಜಿ, ಆರ್ಯ ಈಡಿಗ ಮಹಾಮಂಡಳದ ಸಜೀವ ನಾಣು, ಅರ್ಚನಾ ಜೈಸ್ವಾಲ್, ಅನಿತಾ ಕೃಷ್ಣಮೂರ್ತಿ, ಪಾದಯಾತ್ರೆಯ ಸಂಘಟಕರಾದ ಜಿತೇಂದ್ರ ಸುವರ್ಣ, ಪದ್ಮನಾಭ ಕೋಟ್ಯಾನ್ ಉಪಸ್ಥಿತರಿದ್ದರು.
