ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜಾ ಬೆಂಬಲದೊಂದಿಗೆ ಅಕ್ರಮ ಮರಳು ಗಣಿಗಾರಿಕೆ: ಶೇಖರ್ ಲಾಯಿಲ ಆರೋಪ

ಬೆಳ್ತಂಗಡಿ: ತಾಲೂಕಿನಲ್ಲಿ ಕೇವಲ ಐದು ಕಡೆ ಮಾತ್ರ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದರೂ ಶಾಸಕರ ಸಂರಕ್ಷಣೆಯಲ್ಲಿ ಬಳ್ಳಾರಿಯ ಗಣಿ ಮಾಫಿಯಾವನ್ನೂ ಮೀರಿಸುವ ರೀತಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿದೆ ಎಂದು ಸಿಪಿಐಎಂ ಮುಖಂಡ ಶೇಖರ್ ಲಾಯಿಲ ಆರೋಪಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಗಣಿಗಾರಿಕೆಯ ಬಗೆಗಿನ ದಾಖಲೆಗಳನ್ನು ಬಹಿರಂಗಪಡಿಸಿ ಮಾತನಾಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ 5 ಕಡೆಗಳಲ್ಲಿ ಮಾತ್ರ ಅಧಿಕೃತ ಮರಳುಗಾರಿಕೆಗೆ ಅನುಮತಿ ನೀಡಿದ್ದು, ಇದೀಗ ತಾಲೂಕಿನಾದ್ಯಂತ ಜಿಲ್ಲೆಯ ಜೀವನದಿ ನೇತ್ರಾವತಿ ಹಾಗೂ ಅದರ ಉಪನದಿಗಳಲ್ಲಿ ಎಗ್ಗಿಲ್ಲದೆ ಶಾಸಕ ಹರೀಶ್ ಪೂಂಜಾ (Harish Poonja) ಅವರ ಬೆಂಬಲದೊಂದಿಗೆ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ತಾಲೂಕಿನಲ್ಲಿ ಪಟ್ರಮೆಯಲ್ಲಿ ಒಂದು ತೆಕ್ಕಾರಿನಲ್ಲಿ ಎರಡು ಹಾಗೂ ಬಾರ್ಯದಲ್ಲಿ ಎರಡು ಕಡೆ ಮಾತ್ರ ಮರಳು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ನೀಡಿದೆ. ಆದರೆ ತಾಲೂಕಿನ ಗ್ರಾಮ ಗ್ರಾಮಗಳಿಂದ ಪ್ರತಿ ದಿನ ಅಕ್ರಮ ಮರಳು ಸಾಗಾಟದ ನೂರಾರು ಲಾರಿಗಳು ಓಡಾಡುತ್ತಿದೆ. ತಾಲೂಕಿನಲ್ಲಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣವಿಲ್ಲದೆ ನಡೆಯುತ್ತಿದೆ. ಮರಳು ದಂಧೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ಮರುದಿನ ಅದೇ ಸ್ಥಳದಲ್ಲೇ ಮರಳುಗಾರಿಕೆ ನಡೆಸುತ್ತಾರೆ ಎಂದರೆ ಇದರ ಹಿಂದೆ ನೇರವಾಗಿ ಶಾಸಕ ಹರೀಶ್ ಪೂಂಜಾ ಅವರ ಕೈವಾಡವಿದೆ ಎಂದು ಸ್ಪಷ್ಟವಾಗುತ್ತದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ , ತಾಲೂಕು ಆಡಳಿತ, ಪೋಲಿಸ್ ಇಲಾಖೆಗಳನ್ನು ಶಾಸಕ ಹರೀಶ್ ಪೂಂಜಾ ತನ್ನ ಕೈಗೊಂಬೆಗಳಂತೆ ಕುಣಿಸುತ್ತಿದ್ದಾರೆ. ಅಧಿಕಾರಿಗಳು ಮಾಮೂಲಿಗಾಗಿ ಕೈಯೊಡ್ಡಿ ಮೌನವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ತೋಟತ್ತಾಡಿ ಚಂದ್ರಶೇಖರ ಪೂಜಾರಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಅರ್ಜಿ ನ್ಯಾಯಾಲಯವು ತಿರಸ್ಕರಿಸಿತು. ಜನರ ಕಣ್ಣಿಗೆ ಮಣ್ಣೆರೆಚಲು ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ನೆರಿಯ ಗ್ರಾಮ ಪಂಚಾಯತ್ ನ ಬಿಜೆಪಿ ಸದಸ್ಯ , ಶಾಸಕರ ಆಪ್ತ ಸಚಿನ್ ಎಂಬಾತ ಇಂದಿಗೂ ಬಹಿರಂಗವಾಗಿ ಓಡಾಡುತ್ತಿದ್ದರೂ ಆತನನ್ನು ಮುಟ್ಟುವ ಧೈರ್ಯ ಧರ್ಮಸ್ಥಳ ಪೋಲಿಸರಿಗೆ ಇಲ್ಲ. ಶಿಬಾಜೆಯಲ್ಲಿ ನಡೆದ ಕೊಲೆ, ದರೋಡೆ, ದಲಿತ ದೌರ್ಜನ್ಯ ತಡೆ ಕಾಯ್ದೆ ಪ್ರಕರಣದ ಆರೋಪಿಗಳನ್ನು ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧರ್ಮಸ್ಥಳ ಪೋಲಿಸ್ ಠಾಣೆ, ಬಂಟ್ವಾಳ ಡಿವೈಎಸ್ಪಿ ಕಛೇರಿಗೆ ಕರೆದುಕೊಂಡು ಹೋದರೂ ಅವರನ್ನು ಬಂಧಿಸದರೆ ರಾಜ್ಯಾಥಿತ್ಯ ನೀಡಲಾಗಿದೆ. ಕ್ರಿಮಿನಲ್ ಆರೋಪಿಗಳ ಜೊತೆಗೆ ಬಂಟ್ವಾಳ ಡಿವೈಎಸ್ಪಿ ಶಾಮೀಲಾಗಿದ್ದು ಅವರನ್ನು ತಕ್ಷಣ ಸೇವೆಯಿಂದ ಅಮಾನತು ಗೊಳಿಸಬೇಕು. ಆರಂಬೋಡಿಯಲ್ಲಿ ನಡೆದ ಸುರತ್ಕಲ್ ನ ನಾಟಕ ತಂಡದ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿ, ಕಲಾವಿದರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವುದು ಇಡೀ ಕಲಾ ಜಗತ್ತಿನ ಮೇಲೆ ನಡೆದ ದೌರ್ಜನ್ಯವಾಗಿದೆ. ಒಟ್ಟಿನಲ್ಲಿ ಇಡೀ ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ ಭೀಕರ ಸ್ವರೂಪ ಪಡೆಯುತ್ತಿದೆ. ಆರೋಪಿಗಳ ರಕ್ಷಣೆಯನ್ನು ಶಾಸಕ ಹರೀಶ್ ಪೂಂಜಾ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಾನಂದ ಪಿಲಿಕಲ ಉಪಸ್ಥಿತರಿದ್ದರು.
ಇದನ್ನೂ ಓದಿ: ನನ್ನನ್ನು 'ಟಗರು' 'ಟಗರು' ಅನ್ನುತ್ತಾರೆ, ನಾನು ಯಾರಿಗೆ ಗುಮ್ಮಿದ್ದೇನೆ?: ಸಿದ್ದರಾಮಯ್ಯ