ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಪೊಲೀಸ್ ಠಾಣೆಗೆ ಪತ್ರ: ಆರೋಪಿ ಹನುಮಂತಪ್ಪನನ್ನು ಬಂಧಿಸಿದ ಚೆನ್ನೈ ಪೊಲೀಸರು

ಭಟ್ಕಳ: ಭಟ್ಕಳದಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿದ್ದ ಹೊಸಪೇಟೆಯ ಕಮಲಾಪುರ ಮೂಲದ ಹನುಮಂತಪ್ಪ ಎಂಬಾತನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಭಟ್ಕಳದ ಪೊಲೀಸ್ ಠಾಣೆಗೆ ನ. 29ರ ಮೊಹರು ಇರುವ ಅನಾಮಧೇಯ ಪತ್ರವೊಂದು ಬಂದಿದ್ದು, ಅದರಲ್ಲಿ ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಭಟ್ಕಳದ ಪೊಲೀಸ್ ವೃತ್ತಾಧಿಕಾರಿ ದಿವಾಕರ್ ಪಿ.ಎಂ ಗುರುವಾರ ಶಹರಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ತನ್ನ ಹೆಸರು ಹಾಗೂ ವಿಳಾಸವನ್ನು ಮರೆ ಮಾಚಿಕೊಂಡು ಅಂಚೆ ಪತ್ರದಲ್ಲಿ ಪೋಸ್ಟ್ ಕಾರ್ಡ್ ನ ಮುಖಪುಟದಲ್ಲಿ ಅರ್ಧ ಚಂದ್ರಾಕೃತ ಮೇಲೆ ನಕ್ಷತ್ರ ಚಿಹ್ನೆ ಇದ್ದು, ಅದರ ಕೆಳಗೆ 786 ಮತ್ತು ಉರ್ದು ಭಾಷೆಯಲ್ಲಿ ಎರಡು ಸಾಲು ಬರೆದಿತ್ತು. ಅದರ ಕೆಳಗೆ ಭಟ್ಕಳ ಉತ್ತರಕನ್ನಡ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಕಾರ್ಡ್ ಹಿಂಬದಿ ಅಂಚೆ ಇಲಾಖೆಯ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ರೌಂಡ್ ಸೀಲ್ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯ ಪತ್ರವು ತಮಿಳುನಾಡಿನ ಚೆನ್ನೈ ಪೊಲೀಸರಿಗೂ ಬಂದಿದ್ದು, ಶೀಘ್ರ ಕಾರ್ಯಾಚರಣೆಗಿಳಿದ ಚೆನ್ನೈ ಪೊಲೀಸರು ಚೆನ್ನೈನಲ್ಲಿದ್ದ ಅಂತರಾಜ್ಯ ಕಳ್ಳ ಹೊಸಪೇಟೆಯ ಕಮಲಾಪುರದ ಹನುಮಂತಪ್ಪ ಎಂಬಾತನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿ ಅಂಗಡಿಯೊಂದರಲ್ಲಿ ಲ್ಯಾಪ್ ಟಾಪ್ ಕದ್ದು ಮಾರಾಟ ಮಾಡಲು ಹೋಗಿದ್ದು, ಈ ವೇಳೆ ಅನುಮಾನಗೊಂಡ ಅಂಗಡಿಯಾತ ಲ್ಯಾಪ್ ಟಾಪ್ ನ ಪಾಸ್ ವರ್ಡ್ ಕೇಳಿದಾಗ ಆತ ತಡಬಡಿಸಿದ್ದಾನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಆತನ ಬಂಧನಕ್ಕೆ ಸಹಕರಿಸಿದ್ದರು ಎಂಬ ಮಾಹಿತಿಯು ಲಭ್ಯವಾಗಿದೆ.
ತನಿಖೆ ವೇಳೆ ಈತ ಬೆದರಿಕೆ ಪತ್ರ ಬರೆದಿರುವುದು ತಿಳಿದುಬಂದಿದ್ದು, ಚೆನ್ನೈ ಪೊಲೀಸರು ಸ್ಥಳೀಯ ಭಟ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಭಟ್ಕಳ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.







