ಉಡುಪಿ: ರಾಜ್ಯಪಾಲ ಗೆಹ್ಲೋಟ್‌ರಿಂದ ಅಖಿಲ ಭಾರತ ವಿವಿ ವಾಲಿಬಾಲ್ ಉದ್ಘಾಟನೆ

ಉಡುಪಿ: ನಗರದ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಪ್ರಾರಂಭಗೊಂಡಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗುರುವಾರ ಅಧಿಕೃತ ಚಾಲನೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ತಾನು ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡೆಗಳನ್ನು ಆಡುತಿದ್ದು, ತನ್ನ ಹೈಸ್ಕೂಲ್ ತಂಡವನ್ನು ಪ್ರತಿನಿಧಿಸಿದ್ದೆ ಎಂದು ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ರಾಜ್ಯಪಾಲರು, ತಾನು ಸಚಿವನಾಗಿದ್ದಾಗಲೂ ಕ್ರೀಡೆಗೆ ನೀಡಿದ ಪ್ರೋತ್ಸಾಹವನ್ನು ವಿವರಿಸಿದರು.
ಖೇಲ್ ಇಂಡಿಯಾ ಮೂಲಕ ಒಲಿಂಪಿಕ್ಸ್ ಹಾಗೂ ಏಷ್ಯಾ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ದೇಶದ ದಿವ್ಯಾಂಗ ಕ್ರೀಡಾಪಟುಗಳೂ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರಿದ್ದು, ಅವರಿಗೆ ಸೂಕ್ತ ತರಬೇತಿಗೆ ಮೂಲಸೌಕರ್ಯ ಒದಗಿಸಲು ದೇಶದಲ್ಲಿ ಐದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದೆ. ಅದರಲ್ಲಿ ಗ್ವಾಲಿಯರ್ ಕೇಂದ್ರ ಶೀಘ್ರದಲ್ಲೇ ಲೋಕಾರ್ಪಣೆ ಗೊಳ್ಳಲಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರೀಡೆಗೆ ಮಹತ್ವ ನೀಡುತಿದ್ದು, ವಿವಿಗಳು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕ್ರೀಡೆ ಹಾಗೂ ಉದ್ಯೋಗ ಸದೃಢ ಜೀವನವನ್ನು ರೂಪಿಸುತ್ತದೆ ಎಂದು ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.
ಪಂದ್ಯ ಆಡಲು ಸಿದ್ಧವಾಗಿದ್ದ ಆತಿಥೇಯ ಮಂಗಳೂರು ವಿವಿ ಹಾಗೂ ಪುಣೆಯ ಭಾರತಿ ವಿದ್ಯಾಪೀಠ ವಿವಿ ತಂಡದ ಆಟಗಾರರನ್ನು ರಾಜ್ಯಪಾಲರಿಗೆ ಪರಿಚಯಿಸಲಾಯಿತು. ನಾಣ್ಯ ಚಿಮ್ಮಿಸುವ ಮೂಲಕ ತಂಡದ ಕೋರ್ಟ್‌ನ್ನು ರಾಜ್ಯಪಾಲರು ನಿರ್ಧರಿಸಿದರು. ಆಟಗಾರರು, ಕೋಚ್ ಹಾಗೂ ವ್ಯವಸ್ಥಾಪಕ ರಿಗೆ ಶುಭ ಕೋರಿ, ಅವರಿಗೆ ಕೆಲವು ಸಲಹೆಗಳನ್ನೂ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ರಾಜ್ಯ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ಜೀತ್‌ಸಿಂಗ್ ಶೆಕಾನ್, ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್‌ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮುಖಸ್ಥ ಸುಕುಮಾರ್, ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಪ್ರಶಾಂತ್ ಹೊಳ್ಳ ಹಾಗೂ ಡಾ. ಎ.ಪಿ.ಭಟ್ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅವರು ಸ್ವಾಗತಿಸಿದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ರಾಘವೇಂದ್ರ ವಂದಿಸಿದರು.







