ಮಂಗಳೂರು: ಬಸ್ ಢಿಕ್ಕಿ: ಪಾದಚಾರಿ ಮೃತ್ಯು

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಮೀನು ಮಾರ್ಕೆಟ್‌ನ ಮುಂದೆ ಗುರುವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಪಾದಚಾರಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟವರ ಹೆಸರು ಬಸವರಾಜ್, ವಯಸ್ಸು ಸುಮಾರು 45 ಎಂಬುದಾಗಿ ತಿಳಿದು ಬಂದಿದ್ದು, ಮೃತ ವ್ಯಕ್ತಿಯ ವಿಳಾಸ ಪತ್ತೆಯಾಗಿಲ್ಲ.
ಬಸವರಾಜ್ ಬೆಳಗ್ಗೆ ಮೀನು ಮಾರುಕಟ್ಟೆ ಎದುರು ರಸ್ತೆ ದಾಟುತ್ತಿದ್ದಾಗ ಸ್ಟೇಟ್‌ಬ್ಯಾಂಕ್ ಕಡೆಯಿಂದ ರಾವ್ ಆ್ಯಂಡ್ ರಾವ್ ಸರ್ಕಲ್ ಕಡೆಗೆ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಬಸವರಾಜ್ ಬಸ್‌ನ ಮುಂಭಾಗದ ಚಕ್ರದ ಅಡಿಗೆ ಸಿಲುಕಿದ್ದು, ಬಸ್ ಅವರನ್ನು ಸುಮಾರು 15 ಅಡಿ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಗಂಭೀರ ಸ್ವರೂಪದ ಗಾಯಗೊಂಡಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಸ್ ಚಾಲಕ ಅಶ್ರಫ್ ವುಲ್ಲಾ ಎಂಬಾತನ ನಿರ್ಲಕ್ಷ್ಯತನ ಮತ್ತು ಅಪಾಯಕಾರಿಯಾಗಿ ಬಸ್ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂದು ಮಂಗಳೂರು ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ವಾರಸುದಾರರು ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.