ಮಂಗಳೂರು: ಬಿಲ್ಲವರ ಪಾದಯಾತ್ರೆಯ ಹಿಂದೆ ರಾಜಕೀಯ; ಬಿಜೆಪಿ ಆರೋಪ

ಮಂಗಳೂರು: ಬಿಲ್ಲವರ ಹೆಸರಿನಲ್ಲಿ ಕುದ್ರೋಳಿಯಿಂದ ಬೆಂಗಳೂರಿಗೆ ಶುಕ್ರವಾರ ಆಯೋಜಿಸಲಾಗಿರುವ ಪಾದಯಾತ್ರೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅದಕ್ಕೆ ಬೆಂಬಲವೂ ಇಲ್ಲ. ಈ ಪಾದಯಾತ್ರೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಆರೋಪಿಸಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಎಲ್ಲಾ ಸಮುದಾಯವನ್ನು ಸಮಾನವಾಗಿ ಕಾಣುತ್ತದೆ. ಬಿಲ್ಲವರ ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ? ಎಷ್ಟು ಮಂದಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅಭಿನಂದನಾರ್ಹರು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಸಿದ್ದರಾಮಯ್ಯ ತಕ್ಷಣ ಮುಖ್ಯಮಂತ್ರಿ ಹಾಗೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ ಶೇಣವ, ಮಾಧ್ಯಮ ಸಂಯೋಜಕ ರಣದೀಪ್ ಕಾಂಚನ್ ಉಪಸ್ಥಿತರಿದ್ದರು.







