ದ್ವಿತೀಯ ಟ್ವೆಂಟಿ-20: ಭಾರತದ ಗೆಲುವಿಗೆ 207 ರನ್ ಗುರಿ ನೀಡಿದ ಶ್ರೀಲಂಕಾ
ದಸುನ್ ಶನಕ, ಕುಶಾಲ್ ಮೆಂಡಿಸ್ ಅರ್ಧಶತಕ

ಪುಣೆ, ಜ.5: ಆರಂಭಿಕ ಬ್ಯಾಟರ್ ಕುಶಾಲ್ ವೆುಂಡಿಸ್ (52 ರನ್, 31 ಎಸೆತ), ನಾಯಕ ದಸುನ್ ಶನಕ(ಔಟಾಗದೆ 56, 22 ಎಸೆತ) ಅರ್ಧಶತಕದ ಕೊಡುಗೆ , ಚರಿತ್ ಅಸಲಂಕ(37 ರನ್, 19 ಎಸೆತ)ಹಾಗೂ ಪಥುಮ್ ನಿಶಾಂಖ(33 ರನ್,35 ಎಸೆತ) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ 2ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 207 ರನ್ ಗುರಿ ನೀಡಿದೆ.
ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಶಿವಂ ಮಾವಿ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಶನಕ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿ ಸಹಾಯದಿಂದ ಅರ್ಧಶತಕ ಪೂರೈಸಿದರು. ಮೆಂಡಿಸ್ ಕೂಡ ಅಬ್ಬರದ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದು, 27 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅರ್ಧಶತಕ ಗಳಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಉಮ್ರಾನ್ ಮಲಿಕ್ 48 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರೂ 3 ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಅಕ್ಷರ್ ಪಟೇಲ್(2-24) ಎರಡು ವಿಕೆಟ್ ಪಡೆದರು. ಯಜುವೇಂದ್ರ ಚಹಾಲ್(1-30)ರನ್‌ಗೆ ಕಡಿವಾಣ ಹಾಕಿದರು. ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದ ಶಿವಂ ಮಾವಿ ಇಂದು 4 ಓವರ್‌ಗಳಲ್ಲಿ 53 ರನ್ ನೀಡಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.