ಉಡುಪಿ: ಅಪಘಾತಕ್ಕೆ ಕಾರಣನಾದ ಆರೋಪಿಗೆ ಶಿಕ್ಷೆ
ಉಡುಪಿ: ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದು, ತೀವ್ರ ಸ್ವರೂಪದ ಗಾಯ ಗೊಳಿಸಿದ ಆರೋಪಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2020ರ ಜನವರಿ 7ರಂದು ಸಂಜೆ 7ಗಂಟೆಯ ಸುಮಾರಿಗೆ ಕೆಳಾರ್ಕಳ ಬೆಟ್ಟು ನಿವಾಸಿ ಆಲ್ವಿನ್ ಲಾರೆನ್ಸ್ ಎಂಬಾತನು ಪುತ್ತೂರು ಗ್ರಾಮದ ರಾ. ಹೆ 66 ರಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ತನ್ನ ಕಾರನ್ನು ಎಡ ಬದಿಗೆ ಚಲಾಯಿಸಿ, ರಸ್ತೆ ಅಂಚಿನಲ್ಲಿ ನಿಂತಿದ್ದ ಜೋಸೆಫ್ ಮಿನೇಜಸ್ ಎಂಬುವವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಹಾಗೂ ಬಲಗಾಲಿನ ಮೂಳೆ ಮುರಿತವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಠಾಣೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿ ಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು ಆರೋಪಿ ಆಲ್ವಿನ್ ಲಾರೆನ್ಸ್ ಎಂಬಾತನಿಗೆ 6 ತಿಂಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದರು.





