ಮಂಗಳೂರು: ಚಿಪ್ಸ್ ವಿತರಣಾ ಘಟಕಕ್ಕೆ ಬೆಂಕಿ

ಮಂಗಳೂರು: ನಗರದ ಯೆಯ್ಯಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಚಿಪ್ಸ್ ವಿತರಣಾ ಘಟಕಕ್ಕೆ ಬೆಂಕಿ ತಗಲಿದ ಪರಿಣಾಮ ವಿತರಣಾ ಘಟಕವು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಈ ಘಟನೆಯಿಂದ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಕೈಗಾರಿಕಾ ಪ್ರದೇಶದ ಚಿಪ್ಸ್ ವಿತರಣಾ ಘಟಕದಲ್ಲಿ ಸಂಜೆ 4:45ರ ವೇಳೆಗೆ ಈ ಘಟನೆ ನಡೆದಿದೆ. ಸಮೀಪದಲ್ಲೇ ಇರುವ ಮೆಸ್ಕಾಂನ ನಿರ್ಲಕ್ಷ್ಯದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಚಿಪ್ಸ್ ವಿತರಣಾ ಘಟಕಕ್ಕೆ ಬೆಂಕಿ ಹಿಡಿಯಿತು ಎಂದು ಕಂಪೆನಿಯ ಮಾಲಕರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕದ್ರಿಯ ಅಗ್ನಿಶಾಮಕ ಠಾಣೆಯ ವಾಹನಗಳು ಸ್ಥಳಕ್ಕೆ ತೆರಳಿ ಸುಮಾರು 3 ಗಂಟೆ ಕಾಲ ನಡೆಸಿದ ಪ್ರಯತ್ನದ ಫಲವಾಗಿ ಬೆಂಕಿಯನ್ನು ನಂದಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅಗ್ನಿಶಾಮಕ ದಳದ ಸಿಬ್ಬಂದಿಯು ಸಕಾಲಕ್ಕೆ ಆಗಮಿಸಿದ್ದರಿಂದ ಬೆಂಕಿಯು ಪಕ್ಕದ ಇತರ ಕಾರ್ಖಾನೆಗಳಿಗೆ ಹರಡುವುದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.