ಬೈಂದೂರು ಹುಲ್ಕಡಿಕೆಗೆ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಧಿಕಾರಿ ಭೇಟಿ: ಸ್ಥಳೀಯರಿಂದ ಮಾಹಿತಿ ಸಂಗ್ರಹ
ವಾರ್ತಾಭಾರತಿ ವರದಿ ಫಲಶ್ರುತಿ

ಬೈಂದೂರು: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಳಜಿತ್ ಗ್ರಾಮದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಹುಲ್ಕಡಿಕೆಯಲ್ಲಿ ಪರಿಶಿಷ್ಟ ಪಂಗಡದ ಮರಾಠ ಸಮುದಾಯದವರು ವಾಸವಿರುವ ಪ್ರದೇಶಕ್ಕೆ ಗುರುವಾರ ಸಂಜೆ ಉಡುಪಿ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಧಿಕಾರಿ ದೂದ್‌ಪೀರ್ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಪರಿಶೀಲನೆ ನಡೆಸಿದರು.
ಸಂಪರ್ಕ ರಸ್ತೆ, ತ್ರಿಫೇಸ್ ವಿದ್ಯುತ್ ಸಮಸ್ಯೆ, ಮೊಬೈಲ್ ನೆಟ್‌ವರ್ಕ್, ಕಾಡು ಪ್ರಾಣಿಗಳ ಹಾವಳಿ ಮೊದಲಾದ ಸಮಸ್ಯೆಗಳ ಬಗ್ಗೆ ಸ್ಥಳೀಯರ ಬಳಿ ಐಟಿಡಿಪಿ ಅಧಿಕಾರಿಗಳು ಸಮಗ್ರವಾದ ಮಾಹಿತಿ ಪಡೆದರು.
ಇಲ್ಲಿನ ನಾಗರಿಕರ ಹಲವು ವರ್ಷಗಳ ಸಮಸ್ಯೆ ಈಡೇರದ ಹಿನ್ನೆಲೆ ಕಳೆದ ವಾರ ಸ್ಥಳೀಯ ನೂರಾರು ಮಂದಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಕೂಡ ನೀಡಿದ್ದರು.
ವಾರ್ತಾಭಾರತಿ ವರದಿಗೆ ಸ್ಪಂದನೆ
ಬೈಂದೂರು ಹುಲ್ಕಡಿಕೆಯ ಮರಾಠಿ ಸಮುದಾಯಕ್ಕೆ ಇನ್ನೂ ಸಿಗದ ಮೂಲಸೌಕರ್ಯ’ ಎನ್ನುವ ತಲೆಬರಹದಲ್ಲಿ ಜ.4ರಂದು ವಾರ್ತಾಭಾರತಿ ವಿಸ್ತೃತ ವರದಿ ಪ್ರಕಟಿಸಿ ಅಲ್ಲಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು. ಈ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್ ತಿಳಿಸಿದ್ದು ಅದರಂತೆ ಗುರುವಾರ ಸ್ಥಳಕ್ಕೆ ತೆರಳಿ ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ದಾರೆ. ಅಧಿಕಾರಿಗಳ ಭೇಟಿ ಹಾಗೂ ಸ್ಪಂದನೆ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಯಲಿ ಎಂದರು.
ಅನುದಾನ ಬಂದ ತಕ್ಷಣ ಕ್ರಮ
ಹುಲ್ಕಡಿಕೆಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆಯಲಾಗಿದೆ. ಬಹುತೇಕ ರಸ್ತೆ ಡಾಮರು ಕಿತ್ತಿದ್ದು ಸಮಸ್ಯೆ ಕಂಡುಬಂದಿದೆ. ಗ್ರಾಮದವರೆಗೆ ರಸ್ತೆ ಸಂಪರ್ಕವಿಲ್ಲ. ಈ ಬಗ್ಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಸಂಕ್ಷಿಪ್ತ ವರದಿ ಸಲ್ಲಿಸಿ ಅನುದಾನಕ್ಕಾಗಿ ಬೇಡಿಕೆ ನೀಡಲಾಗುವುದು. ಅಲ್ಲದೆ ರಸ್ತೆ ನಿರ್ಮಾಣಕ್ಕಾಗಿ ಅಂದಾಜು ಪಟ್ಟಿ ಸಿದ್ದಪಡಿಸಿ ಕಳಿಸಲಾಗುತ್ತದೆ. ಅನುದಾನ ಬಂದ ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ. ಇನ್ನು ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆ ಗಮನಕ್ಕೆ ತರಲಾಗುತ್ತದೆ. ನೆಟ್ವರ್ಕ್ ವಿಚಾರದ ಬಗ್ಗೆ ಸಂಬಂದಪಟ್ಟವರ ಬಳಿ ಅಗತ್ಯ ಕ್ರಮದ ಬಗ್ಗೆ ಚರ್ಚಿಸಲಾಗುತ್ತದೆ.
-ದೂದ್‌ಪೀರ್, ಉಡುಪಿ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಧಿಕಾರಿ.