ಮಂಗಳೂರು ವಿವಿ: ಒಂದು ವಾರದ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಪ್ರಾಯೋಜಕತ್ವದ ‘ವಸ್ತುಗಳ ಗುಣಲಕ್ಷಣ ಪತ್ತೆಗಾಗಿ ಅತ್ಯಾಧುನಿಕ ಉಪಕರಣಗಳು’ ಎಂಬ ವಿಷಯದ ಕುರಿತು ಏಳು ದಿನಗಳ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮ ಭಾರತ ಸರಕಾರದ ಎಸ್‌ಟಿಯುಟಿಐ -21 ಯೋಜನೆಯಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಜನವರಿ 10, 2023 ರವರೆಗೆ ಮುಂದುವರಿಯುವ ಕಾರ್ಯಕ್ರಮವನ್ನು ಡಿಎಸ್ಟಿ ಪರ್ಸ್ ಇನ್‌ಸ್ಟ್ರುಮೆಂಟೇಶನ್ ಸೆಂಟರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಎಂಎಚ್‌ಆರ್‌ಡಿ, ಎನ್‌ಎಂಆರ್ ಇನ್ಸ್ಟ್ರುಮೆಂಟ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಎನ್‌ಐಟಿ ವಾರಂಗಲ್, ತೆಲಂಗಾಣದ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಎನ್ ಐಟಿಕೆ ಸುರತ್ಕಲ್ ಡೀನ್ (ಸಂಶೋಧನೆ ಮತ್ತು ಸಲಹೆ), ಪ್ರೊ.ಎಸ್.ಎಂ. ಕುಲಕರ್ಣಿ ಕರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿ, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರಕಾರದ ಇವುಗಳ ನಡುವೆ ಸ್ಥಾಪಿಸಬೇಕಾದ ಪ್ರಗತಿಯ ಮೂರು ಸ್ತಂಭಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಎಸ್‌ಟಿಯುಟಿಐ -21 ಈ ಉದ್ದೇಶವನ್ನು ಪೂರೈಸುವ ಡಿಎಸ್ಟಿಯ ಉತ್ತಮ ಚಿಂತನೆಯ ಕಾರ್ಯಕ್ರಮವಾಗಿದೆ. ಇದು ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ’ಆತ್ಮ ನಿರ್ಭರ್ ಭಾರತ್’ ಮಿಷನ್‌ನ ಉದ್ದೇಶಗಳನ್ನು ಸಾಧಿಸುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಡೀನ್ ಪ್ರೊ.ಎಂ.ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಡಿಎಸ್ಟಿ ಪರ್ಸ್ ಇನ್ಸ್'ಸ್ಟ್ರುಮೆಂಟೇಶನ್ ಸೆಂಟರ್‌ನ ಸಂಯೋಜಕಿ ಪ್ರೊ.ಬಿ.ವಿಶಾಲಾಕ್ಷಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು.
ಎನ್‌ಐಟಿ ವಾರಂಗಲ್‌ನ ಡಿ.ರವಿಕುಮಾರ್, ಯೋಜನೆ ಕುರಿತು ಮಾಹಿತಿ ನೀಡಿದರು. ಗೌರವ ಅತಿಥಿ ಪ್ರೊ. ಎನ್ ರಾಜೇಶ್ವರ್ ರಾವ್, ಮಾಜಿ ಡೀನ್ ಆರ್‌ಸಿ, ವಾರಂಗಲ್ ಅವರು ವರ್ಚುವಲ್ ಮೋಡ್‌ನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಡಿಎಸ್ಟಿ ಪರ್ಸ್ ಉಪಕರಣ ಕೇಂದ್ರದ ಉಪ ಸಂಯೋಜಕ ಹಾಗೂ ತರಬೇತಿ ಕಾರ್ಯಕ್ರಮದ ಸಹ ಸಂಚಾಲಕ ಪ್ರೊ.ಬೋಜ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಯೋಜಕರಾದ ಪ್ರೊ.ಮಂಜುನಾಥ ಪಟ್ಟಾಭಿ, ಪ್ರೊ.ಭಾಸ್ಕರ್ ಶೆಣೈ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಶಬೀನಾ ಎಂ ಖಾನ್ ಕಾರ್ಯಕ್ರಮ ನಿರೂಪಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.