ಸುಳ್ಯ: ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧೆ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಘೋಷಣೆ
ಸುಳ್ಯ: ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಕರ್ನಾಟಕ ರಾಜ್ಯವನ್ನಾಗಿ ಮಾಡುವುದೇ ನಮ್ಮ ಪಕ್ಷದ ಪ್ರಮುಖ ಗುರಿ. ಈ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಹೇಳಿದ್ದಾರೆ.
ಸುಳ್ಯದಲ್ಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣದ ಸ್ಥಾಪನೆಗಾಗಿ ಹುಟ್ಟಿಕೊಂಡಿ ರುವುದು ಕೆ.ಆರ್. ಎಸ್. ಪಕ್ಷ. ಆ.22 ರಿಂದ ಕರ್ನಾಟಕ ಕಟ್ಟೋಣ ಅಭಿಯಾನ ಆರಂಭಿಸಿದ್ದೇವೆ. ತುಮಕೂರಿನ ಪಾವಗಡದಿಂದ ನಮ್ಮ ಯಾತ್ರೆ ಆರಂಭಿಸಿದ್ದು, ಲಂಚ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ಸೇರಿದಂತೆ ನಮ್ಮ ಉದ್ದೇಶವನ್ನು ಜನರ ಮುಂದಿಡುತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೂ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ರಾಜ್ಯದಲ್ಲಿ ಈಗಾಗಲೇ 100 ಕೊಟ್ಟು 40 ಸಾವಿರಕ್ಕೂ ಅಧಿಕ ಮಂದಿ ನಮ್ಮ ಪಕ್ಷದ ಸದಸ್ಯರಾಗಿದ್ದಾರೆ. ಈಗಾಗಲೇ ನಮ್ಮ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಮುಂದಿನ ದಿನದಲ್ಲಿ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಬಂದ ಬಳಿಕ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣದ ಜತೆಗೆ, ಉತ್ತಮ ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಕಟ್ಟುತ್ತೇವೆ. ಯುವ ಜನತೆಗೆ ಉದ್ಯೋಗ ಖಾತ್ರಿ ಪಡಿಸುತ್ತದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧದ ಜತೆಗೆ ಮನುಷ್ಯ ಘನತೆಯಿಂದ ಬದುಕಬಹುದಾದ ವಾತಾವರಣ ನಿರ್ಮಿಸುತ್ತೇವೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಖಾಲಿ ಇರುವ 3 ಲಕ್ಷಕ್ಕೂ ಹೆಚ್ಚು ನೌಕರಿಗಳ ಭರ್ತಿ, ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಜತೆಗೆ ಪ್ರತೀ ತಾಲೂಕಿನಲ್ಲಿಯೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ. ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಪ್ರಥಮ ಆದ್ಯತೆ, ನಿರುದ್ಯೋಗ ಪದವೀಧರರಿಗೆ ಮಾಸಾಶನ, ಎಲ್ಲಾ ತರಹದ ಮಾಸಾಶನಗಳನ್ನೂ ರೂ.2 ಸಾವಿರಕ್ಕೆ ಏರಿಸುವುದು ಹೀಗೆ ಇನ್ನಿತರ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಅವರು ತಿಳಿಸಿದರು.
ಸುಳ್ಯ ತಾಲೂಕಿನಲ್ಲಿರುವ ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸ ಮಾಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಇಲ್ಲಿನ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯ ತನದ ಆಡಳಿತದಿಂದ ಸ್ವತಃ ಗ್ರಾಮಸ್ಥರೇ ಕಾಲು ಸಂಕ ನಿರ್ಮಾಣ ಮಾಡಿರುವುದು ಆಡಳಿತದ ರೀತಿಯನ್ನು ತಿಳಿಸುತ್ತದೆ. ಜನರ ತೆರಿಗೆ ಹಣವನ್ನು ಜನರಿಗೆ ನೀಡಲು ಹಿಂದೇಟು ಹಾಕುತ್ತಿರುವ ಲಂಚಕೋರತನ ಆಡಳಿತವನ್ನು ಕೊನೆಗಾಣಿಸಲು ಕೆಆರ್‍ಎಸ್ ಪಕ್ಷವನ್ನು ಜನರು ಬೆಂಬಲಿಸಬೇಕೆಂದು ಅವರು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಕಾರ್ಯದರ್ಶಿ ಪ್ರಕಾಶ್, ದ.ಕ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಯಶೋಧ, ಮಹದೇವಯ್ಯ ತಿಪಟೂರು, ಮಂಜುನಾಥ್ ಬೆಂಗಳೂರು, ಡೇನಿಯಲ್ ಕೋಲಾರ, ಸುನೀತಾ ರುಝಾರಿಯಾ ಪರಂಗಿಪೇಟೆ, ಆಗಸ್ಟಿನ್ ರೋಡ್ರಿಗಸ್ ಉಪಸ್ಥಿತರಿದ್ದರು.







